

ಚಿತ್ರದುರ್ಗ: ಭಕ್ತಿ, ಧ್ಯಾನ, ಜ್ಞಾನ ಹಾಗೂ ಕಾಯಕ ಯೋಗಗಳ ಸಮ್ಮಿಶ್ರ ರೂಪವೇ ಬಸವಾದಿ ಶರಣರು 900 ವರ್ಷಗಳ ಹಿಂದೆ ಪ್ರತಿಪಾದಿಸಿರುವ ಶಿವಯೋಗವಾಗಿದೆ ಎಂದು ಬೆಳಗಾವಿ ಕೆಎಲ್‌ಇ ವಿದ್ಯಾಸಂಸ್ಥೆಯ ಉಪನ್ಯಾಸಕ ಡಾ.ಅವಿನಾಶ್ ಹೇಳಿದರು.
ಶರಣ ಸಂಸ್ಕೃತಿ ಉತ್ಸವ, ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸಹಜ ಶಿವಯೋಗ ದಲ್ಲಿ ಮಾತನಾಡಿದರು.
ಶಾರೀರಿಕ ವ್ಯಾಯಾಮಕ್ಕೆ ಯೋಗವೆನ್ನುವುದು ಒಂದು ಅಂಶವಾದರೆ, ಬಸವಾದಿ ಶಿವಶರಣರು ಪ್ರತಿಪಾದಿಸಿರುವುದು ಕೂಡ ಒಂದು ಯೋಗವೇ. ಅದನ್ನು ಶಿವಯೋಗ ಎನ್ನುತ್ತೇವೆ. ಇದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ ಕೀರ್ತಿ ಮುರುಘಾಮಠಕ್ಕೆ ಸಲ್ಲುತ್ತದೆ. ಶಿವಯೋಗದ ಅನೇಕ ವೈದ್ಯಕೀಯ ಸಂಶೋಧನೆಗಳಾಗಿವೆ ಎಂದರು.
ಶಿವಯೋಗದ ಪ್ರಾತ್ಯಕ್ಷತೆ ನಡೆಸಿಕೊಟ್ಟ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಮಾತುಗಳು ಶುದ್ಧವಾಗಿರದಿದ್ದರೆ ಮನಸ್ಸು ಮ ಲಿನವಾಗಿರುತ್ತದೆ. ಒಳ್ಳೆಯ ಆಲೋಚನೆಯೊಂದಿಗೆ ವಿಶ್ವಕ್ಕೆ ಕಲ್ಯಾಣವಾಗಲೆಂದು ಇಷ್ಟಲಿಂಗವನ್ನು ಪ್ರಾರ್ಥಿಸೋಣ ಎಂದರು.
ಡಾ.ಶ್ರೀ ಬಸವಕುಮಾರ ಸ್ವಾಮೀಜಿ, ಹರಗುರು ಚರಮೂರ್ತಿಗಳು ಇದ್ದರು. ಖ್ಯಾತ ಉದ್ಯಮಿ ರತನ್‌ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ವಿಚಾರ ಸಂಕಿರಣ
ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಗುರುವಾರ ಆಯೋಜಿತ ಜಯದೇವ ಶ್ರೀಗಳ ಜೀವನ ಮತ್ತು ಸಾಧನೆ ಕುರಿತ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿದ್ದ ಇಳಕಲ್ ವಿಜಯ ಮಹಾಂತೇಶ್ವರ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ಆರ್ಶೀವಚನ ನೀಡಿದರು. ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಜಾನಪದ ವಿದ್ವಾಂಸ ಡಾ. ಮೀರಸಾಬಿಹಳ್ಳಿ ಶಿವಣ್ಣ, ತುಮಕೂರಿನ ಸಾಹಿತಿ ಡಾ.ಬಿ.ನಂಜುಂಡಸ್ವಾಮಿ ವಿಷಯ ಮಂಡಿಸಿದರು. ಡಾ.ಶ್ರೀ ಬಸವಕುಮಾರ ಸ್ವಾಮೀಜಿ, ಡಾ.ಶ್ರೀಬಸವಪ್ರಭು ಸ್ವಾಮೀಜಿ, ಹರಗುರು ಚರಮೂರ್ತಿಗಳು, ಇತಿಹಾಸ ಸಂಶೋಧಕ ಡಾ.ರಾಜಶೇಖರಪ್ಪ, ಶ್ರೀ ಶಿವಾನಂದ ಗುರೂಜಿ ಇದ್ದರು. ಹುರುಳಿ ಬಸವರಾಜ ಸ್ವಾಗತಿಸಿದರು. ದ್ಯಾಮಲಾಂಬಿಕಾ ನಿರೂಪಿಸಿದರು.