

ದಾವಣಗೆರೆ: ಕ್ಯಾಮರಾ ಅನ್ವೇಷಣೆ ವಿಶ್ವದ 800 ಕೋಟಿ ಜನರಿಗೆ ವರವಾಗಿದೆ. ಛಾಯಾಗ್ರಹಣ ಇಲ್ಲವಾಗಿದ್ದರೆ ಸೃಜನಾತ್ಮಕ ಜೀವನ ಮತ್ತು ಸಂತಸದ ದಿನಗಳನ್ನು ಸ್ಮರಣೀಯವಾಗಿರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.
ಫೋಟೋಗ್ರಾಫರ್ಸ್ ಯೂತ್ ವೆಲ್‌ಫೇರ್ ಮತ್ತು ದಾವಣಗೆರೆ ಛಾಯಾಗ್ರಾಹಕರ ಸಹಕಾರ ಸಂಘದ ಸಹಯೋಗದಲ್ಲಿ ನಗರದ ಕಮ್ಮವಾರಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರವಿ ಕಾಣದ್ದನ್ನು ಕವಿ ಕಂಡ ಎನ್ನುತ್ತಾರೆ. ಕವಿಯೂ ಕಾಣದ್ದನ್ನು ಛಾಯಾಗ್ರಾಹಕ ಸೆರೆ ಹಿಡಿಯುತ್ತಾನೆ. ಛಾಯಾಗ್ರಹಣವು ಜೀವನದ ಅದ್ಭುತ ಸ್ಮರಣೀಯ ಕ್ಷಣಗಳನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಸೆರೆ ಹಿಡಿಯಲಿದೆ. ಇಂತಹ ಅಮೂಲ್ಯ ವೃತ್ತಿಯಲ್ಲಿ ತೊಡಗಿದವರು ನಿರಂತರ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇಂದು ಎಲ್ಲ ಕ್ಷೇತ್ರದಲ್ಲೂ ತಂತ್ರಜ್ಞಾನ ಬಳಕೆ ಹೆಚ್ಚಿದೆ. ಛಾಯಾಗ್ರಾಹಕರು ಕೂಡ ಇದನ್ನು ಸದ್ಬಳಕೆ ಮಾಡಿಕೊಂಡು, ಛಾಯಾಗ್ರಹಣದ ಕೌಶಲವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಭುಜಂಗರಾವ್, ಲಕ್ಷ್ಮ್ಮಣರಾವ್ ಮೊದಲಾದ ಹಿರಿಯರಿಂದ ಛಾಯಾಗ್ರಹಣ ಕಲೆ ಆರಂಭವಾಯಿತು. ಈಗ ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಛಾಯಾಗ್ರಾಹಕರಿದ್ದಾರೆ. ಅವರ ಸಮಸ್ಯೆಗಳು ಹಾಗೂ ಸಂಕಷ್ಟಕ್ಕೆ ಜಿಲ್ಲಾಡಳಿತ ಸದಾ ಸ್ಪಂದಿಸಲಿದೆ ಎಂದು ಹೇಳಿದರು.
ಈ ವೇಳೆ ಛಾಯಾಗ್ರಾಹಕರಾದ ಸುರಭಿ ಶಿವಮೂರ್ತಿ, ಪಿ.ಎಸ್. ರವಿ, ಜಿ.ಬಿ. ಪ್ರಶಾಂತಕುಮಾರ್, ಮಧು ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ವೃತ್ತಿಪರ ಛಾಯಾಗ್ರಾಹಕರ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಲ್ಸನ್ ಗೋನ್ಸಾಲ್ವಿಸ್, ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ, ಕಾರ್ಯದರ್ಶಿ ಎಸ್. ದುಗ್ಗಪ್ಪ, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ವಿಜಯಕುಮಾರ್ ಜಾಧವ್, ದಾವಣಗೆರೆ ಛಾಯಾಗ್ರಾಹಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ತಿಪ್ಪೇಸ್ವಾಮಿ ಇದ್ದರು.
ಇದೇ ವೇಳೆ ಹಮ್ಮಿಕೊಂಡಿದ್ದ ದೇವನಗರಿ ಎಕ್ಸ್‌ಪೋ - 23ದಲ್ಲಿ ನಾನಾ ಸಂಸ್ಥೆಗಳ ಸ್ಟಿಲ್ ಮತ್ತು ವಿಡಿಯೋ ಕ್ಯಾಮರಾಗಳು ಮತ್ತು ಬಿಡಿ ಭಾಗಗಳ ಪ್ರದರ್ಶನ ಮತ್ತು ಮಾರಾಟ ಪ್ರಕ್ರಿಯೆ ನಡೆಯಿತು.
---