ವಿಶ್ವ ಹಾಸ್ಪೈಸ್ ಮತ್ತು ಉಪಶಮನ ಆರೈಕೆ ದಿನಾಚರಣೆ

ವಿಶ್ವ ಹಾಸ್ಪೈಸ್ ಮತ್ತು ಉಪಶಮನ ಆರೈಕೆ ದಿನಾಚರಣೆ
Published on

ಹಾಸನ : ಯಾವುದೇ ರೋಗ ಇದ್ದರು ರೋಗಿಯನ್ನು ತಾತ್ಸರ ಮಾಡದೇ ಪ್ರೀತಿ ವಿಶ್ವಾಸದಿಂದ ಆರೈಕೆ ಮಾಡಬೇಕು ಆಗ ಮಾತ್ರ ರೋಗಿಗಳ ಮನಸ್ಸಿನಲ್ಲಿ ಆತ್ಮಸ್ಥೈರ್ಯ ಬರುತ್ತದೆ ಮತ್ತು ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು ಎಂದು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಾಮಾನ್ಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ್ ಆರ್.ಎಂ ಅವರು ತಿಳಿಸಿದ್ದಾರೆ.


ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಹಯೋಗದೊಂದಿಗೆ ಹಿಮ್ಸ್ ನಲ್ಲಿ ಪ್ರಾರಂಭಿಸಿರುವ ಉಪಶಮನ ಆರೈಕೆ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ಹಾಸ್ಪೈಸ್ ಮತ್ತು ಉಪಶಮನ ಆರೈಕೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಎಲ್ಲರೂ ರೋಗಿಗಳ ನೆರವಿಗೆ ಬರಬೇಕು, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯನ್ನು ರೋಗಿಗಳಿಗೆ ನೀಡಬೇಕು ಎಂದು ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಮಾತುಗನ್ನಾಡಿದರು.


ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಹಾಸನ ಶಾಖೆಯ ಜಿಲ್ಲಾ ಸಂಯೋಜಕರಾದ ಯೋಗನಾಥ ಎಂ.ಹೆಚ್ ರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ ದೀರ್ಘಕಾಲಿಕ ಹಾಗೂ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಾ ನನ್ನ ಜೀವನವೇ ಮುಗಿಯಿತು ಇನ್ನೇನು ಸಾಯುತ್ತೇನೆ ಎಂದು ದಿನಗಳನ್ನು ಎಣಿಸುವ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ರೋಗಿಗಳ ಮನೆಗಳಿಗೆ ಬಂದು ರೋಗಿ ಮತ್ತು ರೋಗಿಯ ಕುಟುಂಬಕ್ಕೆ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕವಾಗಿ ಧೈರ್ಯ ತುಂಬುವ ಕೆಲಸವನ್ನು ಮನೆ ಆಧಾರಿತ ಉಪಶಮನ ಆರೈಕೆ ತಂಡದವರು ಮಾಡುತ್ತಿದ್ದು ಈ ತಂಡದ ಸೇವೆ ಮತ್ತು ಆರೈಕೆಯಿಂದ ರೋಗಿಗಳು ಆತ್ಮಸ್ಥೈರ್ಯದಿಂದ ಬದುಕುತ್ತಿದ್ದಾರೆ ಎಂದರು.


ಕಳೆದ 4 ವರ್ಷಗಳಿಂದ ಕ್ಯಾನ್ಸರ್, ಸ್ಟ್ರೋಕ್ ( ಪಾರ್ಶ್ವವಾಯು) ಹೆಚ್.ಐ.ವಿ/ಏಡ್ಸ್, ಕಿಡ್ನಿ ತೊಂದರೆ, ಸ್ಪೈನಲ್ ಕಾರ್ಡ್ ತೊಂದರೆ ಹೀಗೆ ಮುಂತಾದ ದೀರ್ಘಕಾಲಿಕ ಹಾಗೂ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ಸುಮಾರು ಸಾವಿರ ರೋಗಿಗಳಿಗೆ ಮನೆ ಆಧಾರಿತ ಉಪಶಮನ ಆರೈಕೆಯನ್ನು ನೀಡಲಾಗುತ್ತಿದೆ, ಉಪಶಮನ ಆರೈಕೆ ಸೇವೆಯ ಅವಶ್ಯಕತೆ ಇರುವವರು ದೂರವಾಣಿ ಸಂಖ್ಯೆ 9900020487 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.


ಯೋಗಾಂಜಲಿ ಸ್ಪಿರಿಚುಯಲ್ ಫಿಟ್‌ನೆಸ್ ಸೆಂಟರ್ ಹಾಸನ ಇದರ ಆಯುರ್ವೇದ ವೈದ್ಯರು ಮತ್ತು ಪ್ರಾಣ ಚಿಕಿತ್ಸಕರಾದ ಡಾ. ಲೋಕೇಶ್ವರಿ ಅವರು ಮಾತನಾಡಿ ಮನುಷ್ಯ ಜೀವನ ನಡೆಸಲು ಬೇಕಾಗಿರುವುದು ದೈರ‌್ಯ ಮಾತ್ರ, ದೈರ‌್ಯದಿಂದ ಇದ್ದರೆ ಏನು ಬೇಕಾದರು ಸಾಧಿಸಬಹುದು, ಹುಟ್ಟು ಸಾವಿನ ಈ ಜೀವನದಲ್ಲಿ ಸಂತೋಷದಿಂದ ಬದುಕಬೇಕು, ಕಾಯಿಲೆ ಬಂತು ಅಂತ ಕುಗ್ಗಬಾರದು, ಮಾನಸಿಕವಾಗಿ ದೈರ‌್ಯದಿಂದ ಬದುಕಬೇಕು, ಆಗ ಮಾತ್ರ ರೋಗ ಉಲ್ಬಣವಾಗುವುದನ್ನು ತಡೆಗಟ್ಟಬಹುದು, ಉತ್ತಮ ಆಹಾರ, ಉತ್ತಮ ಮನಸ್ಥಿತಿ, ಉತ್ತಮ ಉಸಿರಾಟ ಹಾಗೂ ನಿಯಮಿತವಾಗಿ ಸರಿಯಾದ ವಿಧಾನದಲ್ಲಿ ಯೊಗ, ದ್ಯಾನ, ಪ್ರಾಣಯಾಮವನ್ನು ದಿನನಿತ್ಯ ಅಭ್ಯಾಸ ಮಾಡುತ್ತ ಬಂದರೆ ರೋಗಿಗಳು ಕೂಡ ತುಂಬ ವರ್ಷಗಳ ಕಾಲ ಸಾಮಾನ್ಯ ವ್ಯಕ್ತಿಗಳಂತೆ ಬದುಕಬಹುದು ಎಂದು ಕಾರ್ಯಕ್ರಮದಲ್ಲಿ ರೋಗಿಗಳಿಗೆ ಪ್ರಾಣಯಾಮ ಅಭ್ಯಾಸ ಮಾಡಿಸುತ್ತ ತಿಳಿಸಿದರು.


ಮನೆ ಆಧಾರಿತ ಉಪಶಮನ ಆರೈಕೆ ಕಾರ್ಯಕ್ರಮದ ಸ್ವಯಂ ಸೇವಕ ವೈದ್ಯರು ಮತ್ತು ಪ್ರಿವೆನ್‌ಟೀವ್ ಆಂಕಾಲಾಜಿಸ್ಟ್ ಡಾ. ಜಗದೀಶ್ ಸಿ.ಎನ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದಲ್ಲಿರುವ ಪ್ರತಿಯೊಬ್ಬರು ಒಗ್ಗಟಿನಿಂದ, ಹೃದಯ ಪೂರ್ವಕವಾಗಿ, ರೋಗಿಗಳಿಗೆ ಸೇವೆ ಮತ್ತು ಆರೈಕೆ ಮಾಡಿದರೆ ರೋಗಗಳನ್ನು ಗುಣಪಡಿಸಬಹುದು ಮತ್ತು ರೋಗಿಗಳಿಗೆ ಗುಣಮಟ್ಟದ ಆರೈಕೆ ನೀಡಬಹುದು ಮತ್ತು ರೋಗಿಗಳಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸಿದರೆ ರೋಗಿಗಳಲ್ಲಿ ಬದುಕುವ ಭರವಸೆ ಬರುತ್ತದೆ ಎಂದರು.


ಇದೇ ವೇಳೆ ರೋಗಿಗಳು ಮತ್ತು ಅವರ ಆರೈಕೆದಾರರೊಂದಿಗೆ ಮೇಣದ ಭತ್ತಿ ಹಚ್ಚುವ ಮೂಲಕ ವಿವಿಧ ರೋಗಗಳಿಂದ ಮರಣ ಹೊಂದಿರುವ ರೋಗಿಗಳ ಆತ್ಮಕ್ಕೆ ಶಾಂತಿ ಕೋರಿದರು.

ಕಾರ್ಯಕ್ರಮದಲ್ಲಿ ಡಾ. ಪ್ರಿಯಾಂಕ ಆಗರ್‌ವಾಲ್, ಡಾ.ರಾಜೇಶ್ವರಿ ಹೆಚ್ ಮತ್ತು ಎಸ್.ವಿ.ವೈ.ಎಂ ಮತ್ತು ಪ್ಯಾಲಿಯೇಟಿವ್ ಕೇರ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net