ವಿಶ್ವ ವಿದ್ಯಾಲಯಗಳಿಂದ ಗುಣಮಟ್ಟದ ವಿದ್ಯಾರ್ಥಿಗಳು ಹೊರ ಬರುತ್ತಿಲ್ಲ : ಸಂಸದ ವಿ. ಶ್ರೀನಿವಾಸ ಪ್ರಸಾದ್ ಬೇಸರ

srinivas prasad
Published on

ಮೈಸೂರು: ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಗುಣಮಟ್ಟದ ವಿದ್ಯಾರ್ಥಿಗಳು ಹೊರ ಬರುತ್ತಿಲ್ಲ, ಈ ಬಗ್ಗೆ ಆಲೋಚನೆ ಮಾಡಿದಾಗ ವ್ಯಥೆ ಆಗುತ್ತದೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ನಗರದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರೊ.ಎಂ.ಎಸ್. ಶೇಖರ್ ರಚನೆಯ ಸೋಸಲೆ ಸಿದ್ದಪ್ಪ ಸಮಗ್ರ ಸಾಹಿತ್ಯ ಸಂಪುಟ (ಸಂಪಾದಿತ) ಮತ್ತು ಹೊರಳು ಹಾದಿ (ವಿಮರ್ಶೆ) ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಮೈಸೂರು ವಿಶ್ವ ವಿದ್ಯಾಲಯದಲ್ಲಿ 170 ಸಂಶೋಧನಾ ವಿದ್ಯಾರ್ಥಿಗಳು ಇದ್ದು, ಕೆಲವರಿಗೆ ಸರಿಯಾಗಿ ಮಾತನಾಡಲು ಸಹ ಬರುವು ದಿಲ್ಲ. ಅಧ್ಯಯನದ ಕೊರತೆಯೇ ಇದಕ್ಕೆ ಪ್ರಮುಖ ಕಾರಣ. ಬಹುತೇಕರು ಉರುಳು ಹೊಡೆದು ಉತ್ತೀರ್ಣರಾಗುತ್ತಿದ್ದಾರೆಯೇ ಹೊರತು ಜ್ಞಾನ ಸಂಪಾದನೆ ಮಾಡುತ್ತಿಲ್ಲ. ಸಾಕಷ್ಟು ಯುವಜನರು ನನ್ನ ಬಳಿ ಬಂದು ಹೊರಗುತ್ತಿಗೆಯಲ್ಲಿ ವಿಶ್ವ ವಿದ್ಯಾಲಯದಲ್ಲಿ ಕೆಲಸ ಕೊಡಿಸಿ ಎಂದು ಕೇಳುತ್ತಾರೆ. ಆದರೆ, ಬೋಧನೆ ಮಾಡುವ ಉತ್ಸಾಹವನ್ನು ಯಾರು ತೋರುತ್ತಿಲ್ಲ. ಪ್ರಾಧ್ಯಾಪಕರು ಸಹ ಬೋಧಕೇತರ ಹುದ್ದೆಯ ಕಡೆಗೆ ಆಸಕ್ತಿ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಪಡೆದು ಹೊರ ಬರುವ ಸಾಕಷ್ಟು ವಿದ್ಯಾರ್ಥಿಗಳು ಬೋಧನೆ ಮಾಡುವ ಧೈರ್ಯವೇ ತೋರುತ್ತಿಲ್ಲ. ಬೋಧಕೇತರ ಹುದ್ದೆ ಪಡೆಯಲು ಅವರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ನಾನು ಇಂದಿಗೂ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ. ಆದರೆ, ಯುವಜನರು ಓದುವ ಹವ್ಯಾಸದಿಂದ ವಿಮುಖರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಿರಂತರ ಓದಿನಿಂದ ಮಾತ್ರ ಜ್ಞಾನ ಸಂಪಾದನೆ ಮಾಡಲು ಸಾಧ್ಯ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಶ್ರದ್ಧೆಯಿಂದ ಓದಿದ ಪರಿಣಾಮ ಅವರು ಅಪಾರ ಪ್ರಮಾಣದಲ್ಲಿ ಜ್ಞಾನ ಸಂಪಾದನೆ ಮಾಡಿದರು. ಅಂಬೇಡ್ಕರ್ ನಮಗೆ ರಾಜಕೀಯ ಮೀಸಲಾತಿ ನೀಡದೆ ಹೋಗಿದ್ದರೆ ನಾವು ಸಂಸತ್‌ನಲ್ಲಿ ಕೂರಲು ಸಾಧ್ಯವಾಗುತ್ತಿರಲಿಲ್ಲ. ಅಂಬೇಡ್ಕರ್ ಆ ಕಾಲದಲ್ಲಿಯೇ ಅಷ್ಟೊಂದು ಆಲೋಚನೆ ಮಾಡಿದ್ದರು. ಅದಕ್ಕೆ ಅವರು ಪಡೆದ ಜ್ಞಾನವೇ ಕಾರಣ. ಹಾಗಾಗಿ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಓದುವ ವಿಚಾರದಲ್ಲಿ ನಿಮಗೆ ಏನಾದರು ಸಮಸ್ಯೆಗಳು ಇದ್ದರೆ ತಕ್ಷಣ ನನ್ನನ್ನು ಸಂಪರ್ಕಿಸಿ, ಸಮಸ್ಯೆ ಬಗೆಹರಿಸಲು ನಾನು ಬದ್ಧನಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net