ವಿಶ್ವ ಮೆದುಳು ದಿನದ ಅಂಗವಾಗಿ ಜಾಥಾಗೆ ಡಾ.ಬಿ.ರಾಜಣ್ಣ ಚಾಲನೆ

ವಿಶ್ವ ಮೆದುಳು ದಿನದ ಅಂಗವಾಗಿ ಜಾಥಾಗೆ ಡಾ.ಬಿ.ರಾಜಣ್ಣ ಚಾಲನೆ
Published on

ಹಾಸನ: ಮನುಷ್ಯನ ದೇಹದಲ್ಲಿ ಮೆದುಳು ಪ್ರಮುಖ ಪಾತ್ರ ವಹಿಸಲಿದ್ದು ಅದಕ್ಕೆ ಒತ್ತಡ ರಹಿತ ಜೀವನದ ಮೂಲಕ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಹಿಮ್ಸ್ ನಿರ್ದೇಶಕ ಡಾ.ಬಿ.ರಾಜಣ್ಣ ಅವರು ಹೇಳಿದರು.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿಯಂತ್ರಣ ವಿಭಾಗ, ಬ್ರೈನ್ ಹೆಲ್ತ್ ಕ್ಲಿನಿಕ್‌ನಿಂದ ಹಮಿಕೊಂಡಿದ್ದ ವಿಶ್ವ ಮೆದುಳು ದಿನದ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ಬದುಕಿಗೆ ಮೆದುಳಿನ ಮಹತ್ವ ಏನೆಂಬುದನ್ನು ಜನರಿಗೆ ಅರಿವು ಮೂಡಿಸಲು ಜಾಥಾ ಹಮಿಕೊಳ್ಳಲಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಯುವಕರು ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಸೋಲುಗಳನ್ನೇ ಗಂಭೀರವಾಗಿ ಪರಿಗಣಿಸಿ ಮಾನಸಿಕವಾಗಿ ಕುಗ್ಗುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿಯಮಿತ ಆಹಾರ, ನಿದ್ರೆ,ವ್ಯಾಯಾಮ ಹಾಗು ಯೋಗ ಪದ್ಧತಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ ಅವರು ಮಾತನಾಡಿ, ಮೆದುಳಿನಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದ್ದು, ಆರಂಭದಲ್ಲೇ ಚಿಕಿತ್ಸೆ ಪಡೆಯಬೇಕು. ಮಾನಸಿಕವಾಗಿ ಸದೃಢವಾಗಿದ್ದರೆ ಮಾತ್ರ ಮೆದುಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬಹುದು ಎಂದರು.
ನೋಡಲ್ ಅಧಿಕಾರಿ ಡಾ.ನಾಗೇಶ್ ಆರಾಧ್ಯ ಅವರು ಮಾತನಾಡಿ, ಹಿಮ್ಸ್‌ನಲ್ಲಿ ಕಳೆದ ಎಂಟು ತಿಂಗಳಿಂದ ಬ್ರೈನ್ ಹೆಲ್ತ್ ಕ್ಲಿನಿಕ್ ಆರಂಭಿಸಲಾಗಿದೆ. ತಜ್ಞ ವೈದ್ಯ, ಸಹಾಯಕ ಸಿಬ್ಬಂದಿ ಪ್ರೋಗ್ರಾಂ ವ್ಯವಸ್ಥಾಪಕ ಇರುತ್ತಾರೆ. ಪಾರ್ಶ್ವವಾಯು, ಮೂರ್ಛೆ ರೋಗಕ್ಕೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ವಿ.ಸಂತೋಷ್ ಅವರು ಮಾತನಾಡಿ, ಮೆದುಳು ಪ್ರತಿ ಹಂತದಲ್ಲೂ ಬೆಳೆಯುತ್ತಿರುತ್ತದೆ. ಬಾಲ್ಯದಲ್ಲಿ ಮೆದುಳು ಬೆಳವಣಿಗೆಯಾಗದಿದ್ದರೆ ಬುದ್ದಿ ಮಾಂಧ್ಯರಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಸಿ.ಲೋಕೇಶ್, ವೈದ್ಯಕೀಯ ಅಧೀಕ್ಷಕ ಡಾ.ರಾಘವೇಂದ್ರ, ಕಲಾವಿದ ಬಿ.ಟಿ.ಮಾನವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net