

ಎನ್.ಆರ್.ಪುರ: ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ತೇಜಸ್ವಿ ಅವರು ಯಥಾವತ್ತಾಗಿ ಬದುಕಿನಲ್ಲಿ, ಸಾಹಿತ್ಯದಲ್ಲಿ ಜಾರಿಗೆ ತಂದಿದ್ದಾರೆ ಎಂದು ಶೃಂಗೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ತಿಳಿಸಿದರು.
ಬೆಮ್ಮನೆ ಪಂಚವಟಿ ಸಮುದಾಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಬೆಮ್ಮನೆ ಕುಟುಂಬದವರು ಶೇಷಮ್ಮ ಮತ್ತು ಸಣ್ಣೇಗೌಡ ಅವರ ಹೆಸರಿನಲ್ಲಿ ನೀಡಿದ ದತ್ತಿದಾನದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬದುಕು, ಬರಹ ಎಂಬ ವಿಷಯದ ಕುರಿತು ಮಾತನಾಡಿದರು.
ತೇಜಸ್ವಿ ಅವರನ್ನು ಕುವೆಂಪು ಮಗ ಎಂಬುದಕ್ಕಾಗಿ ಗುರುತಿಸಿಲ್ಲ. ತೇಜಸ್ವಿ ಅವರು ಸಾಹಿತಿಯಾಗಿ, ಲೇಖಕರಾಗಿ, ಮೆಕ್ಯಾನಿಕ್ ಆಗಿ, ಛಾಯಾಚಿತ್ರಗಾಹಕರಾಗಿ, ಮೀನು ಹಿಡಿಯುವ, ಶಿಕಾರಿಗಾರನಾಗಿ, ಕಂಪ್ಯೂಟರ್ ತಂತ್ರ ಜ್ಞಾನದ ಬಗ್ಗೆ ಅಧ್ಯಯನ ಮಾಡುತ್ತಿದ್ದ ವಿಸ್ಮಯಕಾರಿಯಾಗಿದ್ದರು ಎಂದರು.
ಶಿವರಾಮ ಕಾರಂತರು ಹುಚ್ಚು ಮನಸ್ಸಿನ ಹತ್ತು ಮುಖ ಎಂಬ ಕೃತಿ ಬರೆದಿದ್ದಾರೆ. ಆದರೆ ತೇಜಸ್ವಿ ಹುಚ್ಚು ಮನಸ್ಸಿನ 100 ಮುಖಗಳಂತೆ ಕಾಣಿಸುತ್ತಾರೆ. ಅವರ ಅನೇಕ ಕೃತಿಗಳಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಕರ್ವಾಲೋ ಕೃತಿಯನ್ನು ಚಿಮಿಣಿ ದೀಪದಲ್ಲೇ ಬರೆದಿದ್ದರು. ಕುವೆಂಪು ಅವರು ಮಹಿಳೆಯನ್ನು ತಾಯಿಯಂತೆ ಚಿತ್ರಿಸಿದ್ದರೆ, ಶಿವರಾಮ ಕಾರಂತರು ಮಹಿಳೆಯನ್ನು ವಿಚಾರವಂತರನ್ನಾಗಿ ಕಂಡಿದ್ದರು. ಆದರೆ ತೇಜಸ್ವಿ ಅವರು ಮಹಿಳೆಯರಲ್ಲಿ ಬಂಡಾಯ ಕಂಡಿದ್ದರು. ತೇಜಸ್ವಿ ಅವರ ಕಿರುಗೂರಿನ ಗಯ್ಯಳಿಗಳು ಕೃತಿಯಲ್ಲಿ ಮಹಿಳೆಯರ ಸಾಧನೆ ಚಿತ್ರಿಸಿದ್ದಾರೆ. ಹಕ್ಕಿಗಳ ಬಗ್ಗೆ ಅಧ್ಯಯನ ಮಾಡಿದ್ದರು. ತೇಜಸ್ವಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಬಂದಿದ್ದರೂ ಅವರು ಪ್ರಶಸ್ತಿಗಳನ್ನು ಸ್ವೀಕಾರ ಮಾಡದೆ ತಿರಸ್ಕರಿಸಿ ಸಾಮಾನ್ಯ ಮನುಷ್ಯನಂತೆ, ಪ್ರಕೃತಿಯ ಭಾಗವಾಗಿ ಬದುಕಿದ್ದರು ಎಂದು ವಿಶ್ಲೇಷಿಸಿದರು.
ರೋಟರಿ ಅಧ್ಯಕ್ಷ ಕಣಿವೆ ವಿನಯ್ ಅವರು ಬೆಮ್ಮನೆ ಕುಟುಂಬದ ನಿತ್ಯಾ ರಾಜಶೇಖರ್ ಬರೆದ ‘ನಿತ್ಯ ಮಲ್ಲಿಗೆ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವೂ ಅಗತ್ಯವಾಗಿದೆ. ಇತ್ತೀಚೆಗೆ ಮಕ್ಕಳು ವಿದೇಶದಲ್ಲಿ ನೆಲೆಸಿ ತಂದೆ, ತಾಯಿಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ನೀಡಬೇಕು. ಇಲ್ಲದಿದ್ದರೆ ವೃದ್ಧಾಶ್ರಮಗಳು ಜಾಸ್ತಿಯಾಗಲಿವೆ. ಮಲೆನಾಡಿನ ಯುವಜನರು ರೈತರ ಮಕ್ಕಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ತಿಳಿಸಿದರು.
ಕಸಾಪ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಮಾತನಾಡಿ, ಕಸಾಪದಲ್ಲಿ ನಾನು ಅಧ್ಯಕ್ಷನಾಗಿದ್ದಾಗ 18 ದತ್ತಿಗಳು ಇದ್ದವು. ಈಗ 22 ದತ್ತಿಗಳು ಇವೆ. 18 ವರ್ಷ ತುಂಬಿದ ಎಲ್ಲರೂ ಕಸಾಪ ಸದಸ್ಯರಾಗಬಹುದು. 25 ಸಾವಿರ ರೂಪಾಯಿ ನೀಡಿ ದತ್ತಿ ದಾನಿಗಳಾಗಬಹುದು ಎಂದರು.
ಎ.ಎಸ್.ವೆಂಕಟರಮಣ ರೈತ ಗೀತೆ ಹಾಡಿದರು. ಗಾಯಕರಾದ ಹಿರೇನಲ್ಲೂರು ಶ್ರೀನಿವಾಸ್, ಸುಷ್ಮಾ ಯುಗಾಂಧರ್ ಅವರಿಂದ ಗೀತಾ ಗಾಯನ , ಮಕ್ಕಳಿಂದ ಭರತ ನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬೆಮ್ಮನೆ ಕುಟುಂಬದ ಹಿರಿಯರಾದ ಮೀನಾಕ್ಷಮ್ಮ, ಸಮಾಜ ಸೇವಕ ಸಾಲೇಸಿಮಕ್ಕಿ ಚಿದಂಬರ್, ಕವನ ಸಂಕಲನ ರಚಿಸಿದ ನಿತ್ಯಾ ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ಕಸಾಪ ಹೋಬಳಿ ಅಧ್ಯಕ್ಷ ಕಾರ್ತಿಕ್ ಕಾರ್ಗದ್ದೆ, ಕೊನೋಡಿ ಕೃಷಿಕ ರಾಮಚಂದ್ರ ಭಟ್, ಬೆಮ್ಮನೆ ಕುಟುಂಬದ ಹಿರಿಯರಾದ ಬಿ.ಎಸ್.ಮಂಜುನಾಥ್, ಬಿ.ಪಿ.ಮೋಹನ್, ಕೃಷ್ಣ್ಣಮೂರ್ತಿ, ಚಂದ್ರಶೇಖರ್, ನಿವೃತ್ತ ಪ್ರಾಚಾರ್ಯ ದಯಾನಂದ್, ಸುಬೋದ್ ಇದ್ದರು.