ವಿಶ್ವ ಬಾಲಕಾರ್ಮಿಕರ ವಿರೋಧಿ ಜಾಗೃತಿ ಜಾಥಾಗೆ ಚಾಲನೆ

ವಿಶ್ವ ಬಾಲಕಾರ್ಮಿಕರ ವಿರೋಧಿ ಜಾಗೃತಿ ಜಾಥಾಗೆ ಚಾಲನೆ
Published on

ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಹಾಗೂ ಜನ ಜಾಗೃತಿ ಜಾಥಾಗೆ ಹಸಿರು ಬಾವುಟ ಪ್ರದರ್ಶಿಸಿ ಚಾಲನೆ ನೀಡಿದ ಪ್ರಧಾನ ಹಿರಿಯ ನ್ಯಾಯಾಧೀಶರಾದ ಕೆ.ಎಂ. ಪುಟ್ಟಸ್ವಾಮಿ ಬಳಿಕ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಹೋಗಬೇಕು. ಯಾರೂ ಕೂಡ ಬಾಲ ಕಾರ್ಮಿಕರಾಗಬಾರದು. ಮುಖ್ಯವಾಗಿ ಯುವ ಪೀಳಿಗೆ ಈ ಅನಿಷ್ಟ ಪದ್ಧತಿಯನ್ನು ತಡೆಯಬೇಕು. ಬಾಲಕಾರ್ಮಿಕ ಎಂಬುದು ಪಿಡುಗು. ಈ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದರೆ ಯುವ ಪೀಳಿಗೆ ಹೆಚ್ಚಿನ ಗಮನವಹಿಸಬೇಕು. ಯಾವ ಮಕ್ಕಳಿಗೆ ಶಿಕ್ಷಣ ಪಡೆಯಲು ಸಾಧ್ಯವಿಲ್ಲವೋ ಅಂತಹ ಮಕ್ಕಳು ಬಾಲಕಾರ್ಮಿಕರಾಗುತ್ತಾರೆ. ಯಾವ ಮಕ್ಕಳೂ ಕೂಡ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದರು.
ಶಿಕ್ಷಣವನ್ನು ಉತ್ತಮವಾಗಿ ಪಡೆದು ಒಳ್ಳೆಯ ಹುದ್ದೆಗೆ ಹೋಗಬೇಕು. ಕೂಲಿಗೆ ಹೋದರೆ ದಿನಕ್ಕೆ 500 ರೂ. ಇಲ್ಲವೇ ಸಾವಿರ ರೂ. ಸಿಗುತ್ತದೆ. ಉನ್ನತ ಶಿಕ್ಷಣ ಪಡೆದರೆ ಉನ್ನತ ಹುದ್ದೆ ಸಿಗುವುದರ ಜತೆಗೆ ನೀವೇ ಮತ್ತೊಬ್ಬರಿಗೆ ಕೆಲಸ ಕೊಡಬಹುದು. 14 ವರ್ಷಗಳಿಂದ 18 ವರ್ಷದ ಒಳಗಿರುವ ಮಕ್ಕಳು ಶಾಲೆಯನ್ನು ಬಿಟ್ಟು ಗ್ಯಾರೇಜ್, ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಕ್ಕಳನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಆಗ ಕೆಲಸ ಮಾಡಿಸಿಕೊಳ್ಳುವವರ ಮೇಲೆ ಮೇಲೆ ಕಠಿಣ ಕಾನೂನು ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬಾಲಕಾರ್ಮಿಕತೆ ರೂಪಗಳು ತುಂಬಾ ಅಪಾಯಕಾರಿ. ಗುಲಾಮಗಿರಿ, ಅಥವಾ ಬಲವಂತದ ದುಡಿಮೆಯ ಇತರ ಪ್ರಕಾರಗಳು, ಮಾದಕವಸ್ತು ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆಗಳಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸುದೇ ಹೆಚ್ಚು. ಇವುಗಳನ್ನು ತಡೆಯುವದರ ಜತೆಗೆ ಬಾಲ ಕಾರ್ಮಿಕರಲ್ಲಿ ಕಂಡು ಬರುವ ಪೌಷ್ಟಿಕ ಆಹಾರ ಕೊರತೆಯಿಂದಾಗಿ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೆಲವೊಮ್ಮ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು, ಬಾಲ ಕಾರ್ಮಿಕ ಪದ್ಧತಿಯಿಂದ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಜಾಥಾ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಟಿ. ಪ್ರಸನ್ನ ದಾಸರಕೊಪ್ಪಲು, ಕಾರ್ಮಿಕ ಅಧಿಕಾರಿ ಕೆ.ಎಸ್. ಯಮುನಾ, ಉಪಕಾರ್ಮಿಕ ಆಯುಕ್ತ ಸೋಮಣ್ಣ, ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕರಾದ ಎಚ್. ಕನಕಲಕ್ಷ್ಮೀ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net