

ಮೈಸೂರು: ನಗರದ ಮಾನಸಗಂಗೋತ್ರಿಯಲ್ಲಿರುವ ವಿಜ್ಞಾನ ಭವನದ ಸಭಾಂಗಣ ದೇಶದ ಪ್ರತಿಭಾವಂತರ ಕಲಾಪ್ರದರ್ಶನಕ್ಕೆ ಮಂಗಳವಾರ ವೇದಿಕೆಯಾಯಿತು. ನೃತ್ಯ, ಸಂಗೀತ, ಜಾನಪದ ಸೇರಿದಂತೆ ವಿವಿಧ ಪ್ರದರ್ಶಕ ಕಲೆಗಳ ಸಂಗಮಕ್ಕೂ ಕಾರಣವಾಯಿತು.
ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದ ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ವತಿಯಿಂದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿರುವ 5 ದಿನಗಳ ವಿಶ್ವ ನೃತ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಇಲ್ಲಿ ದೇಶದ ವಿವಿಧ ಕಲೆಗಳು ಪ್ರಸ್ತುತಗೊಂಡು ಸಭಿಕರನ್ನು ಸಾಂಸ್ಕೃತಿಕ ಲೋಕಕ್ಕೆ ಕರೆದೊಯ್ಯಿತು. ಎಸ್ಎನ್ಎ ಫೆಲೋಗಳು, ಪ್ರಶಸ್ತಿ ಪುರಸ್ಕೃತರು ಸಂಗೀತ, ನೃತ್ಯವನ್ನು ಪ್ರದರ್ಶಿಸಿ ನೆರೆದವರ ಮನಗೆದ್ದರು. ಮೇ 3ರವರೆಗೆ ಇಲ್ಲಿ ವಿವಿಧ ಪ್ರದರ್ಶನ ಕಲೆಗಳ ಸುಧೆಯೇ ಹರಿಯಲಿದೆ.
ಸಮರ ನೃತ್ಯ ಪ್ರಕಾರಕ್ಕೆ ಸೇರಿರುವ ಜಾರ್ಖಂಡ್ನ ಚೌಹು ನೃತ್ಯ ಪ್ರದರ್ಶನ ವಿಶಿಷ್ಟ ಅನುಭವ ಉಣಬಡಿಸಿತು. ಮಹಿಷಾಸುರ ಮರ್ದಿನಿ ನೃತ್ಯರೂಪಕವನ್ನು ಸೊಗಸಾಗಿ ಪ್ರಸ್ತುತಪಡಿಸಲಾಯಿತು. ಪರೀಕ್ಷಿತ್ ಮಹತೋ ನೇತೃತ್ವದ ಜಾರ್ಖಂಡ್ನ ಕಲಾವಿದರು ಮಹಿಷಾಸುರ, ಚಾಮುಂಡೇಶ್ವರಿ, ಬ್ರಹ್ಮ ವಿಷ್ಣು, ಮಹೇಶ್ವರ ಪಾತ್ರಗಳನ್ನು ಅಚ್ಚುಕಟ್ಟಾಗಿ ಅಭಿನಯಿಸಿದರು.
ಮೈಸೂರಿನ ಆರ್.ವಿಶ್ವೇಶ್ವರನ್ ಅವರು ಕರ್ನಾಟಕ ಸಂಗೀತ ಗಾಯನದೊಂದಿಗೆ ಮೋಡಿ ಮಾಡಿದರು. ಚೆನ್ನೈ ಮಹಾರಾಜಪುರಂ ಎಸ್.ರಾಮಚಂದ್ರನ್ ಅವರು ಸಹ ಕರ್ನಾಟಕ ಸಂಗೀತ ಗಾಯನದೊಂದಿಗೆ ಸಭಿಕರನ್ನು ರಂಜಿಸಿದರು.
ಜೋಧಪುರದ ಬಸಂತ್ ಕಬ್ರ ಅವರು ಹಿಂದುಸ್ತಾನಿ ವಾದ್ಯವಾದ ಸರೋದ್, ಸಾಸ್ ನಗರದ ಹರ್ವಿಂದರ್ ಸಿಂಗ್ ಅವರು ಹಿಂದುಸ್ತಾನಿ ಮತ್ತು ಧರ್ಮನಾಥ್ ಮಿಶ್ರಿ ಲಖನೌ, ಹಾರ್ಮೋನಿಯಂ ವಾದನ ಗಮನ ಸೆಳೆಯಿತು.
ನಿರಂಜನ್ ರೌಟ್ ಅವರಿಂದ ಒಡಿಸ್ಸಿ ನೃತ್ಯ, ನೋಯೊಂಶಾಖಿ ಅವರಿಂದ ಮಣಿಪುರಿ ನೃತ್ಯ, ಕಲಾ ವಿಜಯನ್ ಅವರಿಂದ ಮೋಹಿನಿ ಆಟ್ಟಂ ನೃತ್ಯ, ರಾಜಾರೆಡ್ಡಿ ಮತ್ತು ರಾಧಾ ರೆಡ್ಡಿ ಅವರಿಂದ ಕುಚುಪುಡಿ ನೃತ್ಯ ನೆರೆದವರನ್ನು ಆಕರ್ಷಿಸಿತು.
ಉತ್ಸವಕ್ಕೆ ಚಾಲನೆ ನೀಡಿದ ನೃತ್ಯ ಕಲಾವಿದೆ ವಿದುಷಿ ಲಲಿತಾ ಶ್ರೀನಿವಾಸನ್ ಮಾತನಾಡಿ, ಇತ್ತೀಚೆಗೆ ಉತ್ಸವಗಳಿಗೆ ಪ್ರೋತ್ಸಾಹ ಕಡಿಮೆಯಾಗಿದೆ. ಉತ್ಸವಗಳನ್ನು ಆಯೋಜಿಸಿ ಜನರ ಮನ್ನಣೆ ಗಳಿಸುವುದು ಕಷ್ಟಕರವಾಗಿದೆ.
ಹೀಗಾಗಿ, ಹಲವರು ಕಾರ್ಯಕ್ರಮ ಆಯೋಜನೆಯನ್ನೇ ನಿಲ್ಲಿಸಿದ್ದಾರೆ. ಅಕಾಡೆಮಿಯು ಅಗತ್ಯ ಪ್ರೋತ್ಸಾಹ ನೀಡಬೇಕು. ಕಲೆ ಹಾಗೂ ಕಲಾವಿದರು ಬೆಳೆಯಲು ಅನುಕೂಲವಾಗುತ್ತದೆ ಎಂದರು.
ವಿದ್ವಾನ್ ಆರ್.ವಿಶ್ವೇಶ್ವರನ್, ಸಂಗೀತ ವಿವಿ ಕುಲಪತಿ ನಾಗೇಶ್ ವಿ.ಬೆಟ್ಟಕೋಟೆ, ಕುಲಸಚಿವರಾದ ಪ್ರೊ.ಎಂ.ಜಿ.ಮಂಜುನಾಥ, ಕೆ.ಎಸ್.ರೇಖಾ, ಕಾರ್ಯಕ್ರಮ ಅಧಿಕಾರಿ ಶಿಲ್ಪಾ ನಾಗರಾಜು, ನಿರ್ವಾಹಕ ಹರಿ ಓಂಪ್ರಕಾಶ್, ಅಕಾಡೆಮಿಯ ಜಂಟಿ ನಿರ್ದೇಶಕ ರಘು ಇದ್ದರು.