

ಚಿಕ್ಕಬಳ್ಳಾಪುರ: ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸುಧಾರಣಾ ಕ್ರಮಗಳಿಗೆ ಸರ್ಕಾರ ಒತ್ತು ನೀಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಎಸ್‌ಜೆಸಿಐಟಿ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡಾ.ಕೆ.ಸುಧಾಕರ್ ೌಂಡೇಷನ್ ಶನಿವಾರ ಮತ್ತು ಭಾನುವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಉಚಿತ ಬೃಹತ್ ಆರೋಗ್ಯ ಮೇಳಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಒಂದೇ ಸೂರಿನಡಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ಆರೋಗ್ಯ ಮೇಳಗಳು ಸಹಕಾರಿಯಾಗಿವೆ ಎಂದರು.
ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶಗಳಲ್ಲಿ ಬಹು ಮುಖ್ಯವಾಗಿ ಆರೋಗ್ಯದ ಬಗ್ಗೆಯೇ ಹೆಚ್ಚಿನ ಕಾಳಜಿ ತೋರಲಾಗುತ್ತದೆ. ಇಂತಹ ಮನೋಭಾವನೆಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಜನರಲ್ಲೂ ಕಾಣಬೇಕಾಗಿದೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿರುವ ಬೃಹತ್ ಆರೋಗ್ಯ ಮೇಳದಲ್ಲಿ 1.50 ಲಕ್ಷ ಜನರು ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದ ದಾಖಲೆ ಬರೆದಿರುವುದು ಶ್ಲಾಘನೀಯ. ಮತ್ತೊಂದೆಡೆ ನೋಂದಾಯಿತರ ಪೈಕಿ ಶೇ.70 ರಷ್ಟು ಜನರ ರಕ್ತ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಿರುವುದೂ ಸಹ ದೊಡ್ಡ ಸಾಧನೆಯಾಗಿದೆ ಎಂದರು.
ಭಾರತದಲ್ಲಿ ಕರೊನಾ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡಲಾಗಿದೆ. ಈಗಾಗಲೇ ಮೊದಲ ಡೋಸ್‌ನಲ್ಲಿ ಶೇ.100 ರಷ್ಟು, ಎರಡನೇ ಡೋಸ್‌ನಲ್ಲಿ ಶೇ.98ರಷ್ಟು ಹಾಗೂ ಬೂಸ್ಟರ್ ಡೋಸ್‌ನಲ್ಲಿ ಶೇ.70ರಷ್ಟು ಸಾಧನೆ ತೋರಲಾಗಿದೆ. ಇದು ಕಡಿಮೆ ಜನಸಂಖ್ಯೆ ಹೊಂದಿದ್ದರೂ ಇತರ ಶ್ರೀಮಂತ ರಾಷ್ಟ್ರಗಳಿಗೆ ಸಾಧ್ಯವಾಗಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರೋಗ್ಯ ಮೇಳಗಳು ತುಂಬಾ ಅನುಕೂಲಕರ. ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಪ್ರದೇಶದ ಜನರು ಸೇರಿ ಅನೇಕರು ಕೆಲಸದ ಒತ್ತಡ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಆರೋಗ್ಯದ ಕಡೆಗೆ ಕಾಳಜಿ ತೋರುವುದಿಲ್ಲ. ಕೊನೆಗೆ ನಿರ್ಲಕ್ಷೃ ವಹಿಸಿ, ಸಂಕಷ್ಟ ಅನುಭವಿಸುತ್ತಾರೆ ಎಂದರು.
ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೆ ಇಲ್ಲ. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಹೊಂದಿರುವ ಸಂದರ್ಭದಲ್ಲಿ ಎಷ್ಟೇ ಶ್ರೀಮಂತರಾದರೂ ನೆಮ್ಮದಿ ಇರುವುದಿಲ್ಲ. ಇದನ್ನರಿತು ವೈದ್ಯರು ಮತ್ತು ಶಿಕ್ಷಕರು ಜೀವನದಲ್ಲಿ ಮುಖ್ಯವಾದ ಆರೋಗ್ಯ ಭಾಗ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ವಿವಿಧ ಇಲಾಖೆಯ ಅಧಿಕಾರಿಗಳು, ಸ್ವಯಂಸೇವಕರು ಸೇರಿ ಹಲವರ ಸಂಘಟಿತ ಪ್ರಯತ್ನದಿಂದಾಗಿ ಆರೋಗ್ಯ ಮೇಳವು ಯಶಸ್ವಿಯಾಗಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿ, ಆರೋಗ್ಯ ಮತ್ತು ಶೈಕ್ಷಣಿಕ ಸೇರಿ ನಾನಾ ಸುಧಾರಣೆಗಳೊಂದಿಗೆ ಭಾರತವು ಬದಲಾಗುತ್ತಿದೆ. ಜಾಗತಿಕವಾಗಿ ಮತ್ತಷ್ಟು ಬಲವರ್ಧನೆ ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬದುಕಿಗೆ ಆಧಾರವಾಗಿ ನಿಲ್ಲುವ ತಂದೆ-ತಾಯಿ, ಗುರು, ವೈದ್ಯರಿಗೂ ವಿಶಿಷ್ಟ ಸ್ಥಾನದ ಮೂಲಕ ಗೌರವಿಸುವ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ದೇಶ ಭಾರತ. ಇದು ಸಮರ್ಥ ನಾಯಕತ್ವದಲ್ಲಿ ಜಾಗತಿಕವಾಗಿ ವೇಗದ ಬೆಳವಣಿಗೆಯೊಂದಿಗೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ತಿಳಿಸಿದರು.
ಯಾವುದೇ ಸರ್ಕಾರಗಳು ಜನರ ಮನೆ ಬಾಗಿಲಿಗೆ ತೆರಳಿ ಸವಲತ್ತುಗಳನ್ನು ಒದಗಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ನಾನಾ ಸುಧಾರಣೆಗಳಾಗುತ್ತಿವೆ. ಕೇಂದ್ರ ಸರ್ಕಾರವು ಕ್ರಾಂತಿಕಾರಿ ನಿರ್ಧಾರಗಳಿಂದ ದಾಖಲೆಯನ್ನು ಸೃಷ್ಟಿಸುತ್ತಿದೆ. ಕರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಯಾರೂ ಸಹ ಲಂಚಕೊಟ್ಟು ಲಸಿಕೆ ಹಾಕಿಸಿಕೊಂಡಿಲ್ಲ. ಡಿಜಿಟಲ್ ವ್ಯವಸ್ಥೆಯ ನಿರ್ವಹಣೆಯೊಂದಿಗೆ ಲಸಿಕೆಯ ದಾಖಲೆ ನೀಡಲಾಯಿತು ಎಂದರು.
ಆರೋಗ್ಯ ಸಚಿವರ ಬಗ್ಗೆ ಮೆಚ್ಚುಗೆ : ಜಾಗತಿಕ ದಾಖಲೆಯ ಆರೋಗ್ಯ ಮೇಳದ ರೂವಾರಿ ಸಚಿವ ಸುಧಾಕರ್‌ಗೆ ಬಗ್ಗೆ ಬಿ.ಎಲ್.ಸಂತೋಷ್ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವರ ಸಾರಥ್ಯದಲ್ಲಿ ಸರ್ಕಾರವು ಜನಪರ ಕೆಲಸಗಳ ಮೂಲಕ ಹೊಸ ದಾಖಲೆಗೆ ಕಾರಣವಾಗುತ್ತಿದೆ. ಇಲ್ಲಿ ಒಂದೇ ಸೂರಿನಡಿ ಸಾವಿರಾರು ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವುದು ಸುಲಭದ ಮಾತಲ್ಲ. ಅದರಲ್ಲೂ ಜಾಗತಿಕ ದಾಖಲೆಯು ಹೆಗ್ಗಳಿಕೆಯ ವಿಚಾರ. ಹೀಗೆ ತವರು ಜಿಲ್ಲೆಯ ಜತೆಗೆ ಬೇರೆ ಬೇರೆ ಜಿಲ್ಲೆಗಳಲ್ಲೂ ಹೊಸ ಹೊಸ ದಾಖಲೆಯನ್ನು ಬರೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪ್ರತಿಯೊಬ್ಬರೂ ಧರ್ಮದ ಮೂಲಕ ಮುಕ್ತಿಯನ್ನು ಪಡೆಯಬಹುದು. ಆದರೆ, ಇದಕ್ಕೆ ಸಾಧನವಾದ ಮಾನಸಿಕ ಮತ್ತು ದೈಹಿಕ ಆರೋಗ್ಯ ಚೆನ್ನಾಗಿರಬೇಕು. ಕ್ಷಣಿಕ ಸುಖಕ್ಕಾಗಿ ನಾನಾ ದುಶ್ಚಟಗಳಗೊಳಾಗಿ ಆರೋಗ್ಯ ಕೆಡಿಸಿಕೊಂಡು, ಮನೆ ಮತ್ತು ದೇಶಕ್ಕೆ ಹೊರೆಯಾಗಬಾರದು. ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಂಕಲ್ಪ ಮಾಡಬೇಕು ಎಂದರು. ಲೌಕಿಕ ಬದುಕು ಉತ್ತಮವಾಗಿರಬೇಕು. ಆಗ ಜೀವನವನ್ನು ಚೆಂದವಾಗಿ ಕಳೆಯಲು ಸಾಧ್ಯವಾಗುತ್ತದೆ. ಇದನ್ನರಿತು ಹಿರಿಯರು ದೇಹ ಮತ್ತು ಮಾನಸಿಕ ಆರೋಗ್ಯದ ಮಹತ್ವಕ್ಕೆ ಹೆಚ್ಚು ಒತ್ತು ನೀಡಬೇಕಾಗಿರುವ ಬಗ್ಗೆ ಒತ್ತಿ ಹೇಳಿದ್ದಾರೆ ಎಂದರು.
ದಾಖಲೆ ಹಿಡಿದು ಬಂದ ಜನರು: ಚಿಕ್ಕಬಳ್ಳಾಪುರ: ಸದಾ ವಿದ್ಯಾರ್ಥಿಗಳಿಂದ ಗಿಜಿಗುಡುತ್ತಿದ್ದ ಕಾಲೇಜಿನಲ್ಲಿ ಜನರ ಕಲರವ, ಸ್ವಯಂ ಸೇವಕರ ಮಾರ್ಗದರ್ಶನ, ನೋಂದಣಿಗೆ ಬೃಹತ್ ಸಾಲು, ಅಕ್ಕರೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ಆರೋಗ್ಯ ತಪಾಸಣೆ, ರಾರಾಜಿಸುತ್ತಿದ್ದ ಮಹತ್ವದ ಮಾಹಿತಿಯ ಮಾರ್ಗದರ್ಶಿ ಲಕಗಳು, ಅಲ್ಲಲ್ಲಿ ವಿವಿಧ ಇಲಾಖೆಯ ಕಾರ್ಯಕ್ರಮಗಳ ಅರಿವು ಮೂಡಿಸುವ ಚಟುವಟಿಕೆ.
- ಇವು ಎಸ್‌ಜೆಸಿಐಟಿ ಕಾಲೇಜಿನಲ್ಲಿ ಕೈಗೊಂಡಿದ್ದ ಆರೋಗ್ಯ ಮೇಳದ ಮೊದಲ ದಿನವಾದ ಶನಿವಾರ ಕಂಡು ಬಂದ ದೃಶ್ಯಗಳು. ಆರೋಗ್ಯ ತಪಾಸಣೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಮತ್ತು ಪ್ರತಿಷ್ಠಿತ ಸಂಸ್ಥೆಗಳಿಂದ ಆಗಮಿಸಿದ ವೈದ್ಯಕೀಯ ಸಿಬ್ಬಂದಿಯಿಂದ ಕಾಲೇಜಿನಲ್ಲಿ ಅಕ್ಷರಶಃ ಜನಸಾಗರದ ದೊಡ್ಡ ಆಸ್ಪತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಆರೋಗ್ಯ ಮೇಳದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಅನೇಕ ಜನರು ನೋಂದಣಿ ದಾಖಲೆಗಳನ್ನು ಹಿಡಿದುಕೊಂಡು ಬಂದಿದ್ದರು. ವಿಶೇಷ ಕೌಂಟರ್‌ಗಳಲ್ಲಿ ಮಾಹಿತಿ ನೀಡಿ, ಸಂಬಂಧಪಟ್ಟ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆದರು. ಪ್ರಾಥಮಿಕ ತಪಾಸಣೆ, ಪ್ರಯೋಗಾಲಯ ವರದಿಯನ್ನಾಧರಿಸಿ ಔಷಧ ವಿತರಿಸಲಾಯಿತು. ಶಸಚಿಕಿತ್ಸೆಯುಳ್ಳವರಿಗೆ ಅಗತ್ಯ ಮಾರ್ಗದರ್ಶನ ನೀಡಿ, ಮುಂದುವರಿದ ಚಿಕಿತ್ಸೆಯ ಾಲೋಅಪ್ ತಿಳಿಸಲಾಯಿತು.
ಉಚಿತ ಸಾರಿಗೆ ವ್ಯವಸ್ಥೆ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರತಿ ವಾರ್ಡ್ ಮತ್ತು ಗ್ರಾಪಂನಿಂದ ಜನರನ್ನು ಉಚಿತವಾಗಿ ಸಾರಿಗೆ ವಾಹನದಲ್ಲಿ ಕರೆದುಕೊಂಡು ಬರಲಾಯಿತು. ಮೇಳದ ಕೇಂದ್ರ ಸ್ಥಳದಲ್ಲಿ ನೋಂದಣಿ, ತಪಾಸಣೆಯ ಬಳಿಕ ಜನರಿಗೆ ತಿಂಡಿ, ಬಳಿಕ ಮಧ್ಯಾಹ್ನದ ಊಟದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಸಾವಿರಾರು ಜನರು ಒಂದೆಡೆ ಸೇರುವುದರಿಂದ ಸಹಜವಾಗಿ ಟ್ರಾಫಿಕ್ ಜಾಮ್ ಉಂಟಾಗುವುದನ್ನು ಅರಿತು, ವಾಹನ ನಿಲುಗಡೆ, ಮೇಳದ ಪ್ರವೇಶ ಮತ್ತು ನಿರ್ಗಮನ, ಚಿಕಿತ್ಸೆಗೆ ಪ್ರತ್ಯೇಕ ಕೌಂಟರ್, ಮಾರ್ಗದರ್ಶನ ಮತ್ತು ಸಹಾಯವಾಣಿ ಕೇಂದ್ರ ತೆರೆಯಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿತ್ತು.
ರಕ್ತದಾನ ಶಿಬಿರ: ಆರೋಗ್ಯ ಮೇಳದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೆಡ್ ಕ್ರಾಸ್ ಸಂಸ್ಥೆಯು ಕೈಗೊಂಡಿದ್ದ ರಕ್ತದಾನ ಶಿಬಿರದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿ ಹಲವರು ರಕ್ತದಾನ ಮಾಡಿದರು. ಆರೋಗ್ಯವಂತ ವ್ಯಕ್ತಿ ನಿಗದಿತ ಅವಧಿಯಲ್ಲಿ ರಕ್ತದಾನ ಮಾಡಬೇಕು. ಇದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ, ಹೃದ್ರೋಗ ಸೇರಿ ಇತರ ಕಾಯಿಲೆಗಳಿಗೆ ತುತ್ತಾಗುವುದು ತಪ್ಪಿ, ಆರೋಗ್ಯ ಮತ್ತಷ್ಟು ವೃದ್ಧಿಯಾಗುತ್ತದೆ. ಮತ್ತೊಂದೆಡೆ ರಕ್ತದ ಕೊರತೆಯಿಂದ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಹಲವರು ಜೀವ ಕಳೆದುಕೊಳ್ಳುವುದು ತಪ್ಪುತ್ತದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು. ಜಿಲ್ಲೆಯಲ್ಲಿ ಉತ್ತಮವಾಗಿ ರೆಡ್ ಕ್ರಾಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತ, ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಕೈಗೊಳ್ಳುತ್ತಿದೆ. ಇದರ ಯಶಸ್ವಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.