

ಬಸವಕಲ್ಯಾಣ: ವಚನ ಚಳವಳಿ ಎಲ್ಲರನ್ನೂ ಒಳಗೊಳ್ಳುವಿಕೆಯ ಮೂಲಕ ಇಡೀ ವಿಶ್ವದ ಚರಿತ್ರೆಯಲ್ಲಿ ಮಹತ್ವ ಪಡೆದಿದೆ ಎಂದು ಬೆಂಗಳೂರಿನ ಹಿರಿಯ ಚಿಂತಕ ಡಾ. ವಡ್ಡಗೆರೆ ನಾಗರಾಜಯ್ಯ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬುದ್ಧನ ನಂತರ ವೈಚಾರಿಕ ಬೆಳಕು ಹರಿಸಿ, ಕಲ್ಯಾಣದ ನೆಲದಲ್ಲಿ ಎಲ್ಲರಿಗೂ ಲಿಂಗ ಸಮಾನತೆ-ಸಾಮಾಜಿಕ ನ್ಯಾಯ ಕೊಡಿಸಿದ್ದು ಬಸವಣ್ಣನವರು. ನಿರ್ಲಕ್ಷಿತ ಸಮುದಾಯಗಳಿಗೆ ಅಧಿಕಾರ ಕೊಡುವ ಮೂಲಕ ಸಾಮಾಜಿಕವಾಗಿ ಮುನ್ನೆಲೆಗೆ ತರಲು ಪ್ರಯತ್ನಿಸಿದ್ದು ವಚನ ಚಳವಳಿಯಾಗಿದೆ ಎಂದು ವಿಶ್ಲೇಷಿಸಿದರು.
ಸಮಾರಂಭ ಉದ್ಘಾಟಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಚಿದ್ರಿ ಮಾತನಾಡಿ, ಸರ್ಕಾರಿ ನೌಕರರ ಎಲ್ಲ ಸಮಸ್ಯೆಗಳನ್ನೂ ಸಕಾರಾತ್ಮಕ ರೀತಿಯಲ್ಲಿ ಬಗೆಹರಿಸಲು ಪ್ರಯತ್ನೀಸೋಣ. ನಮ್ಮ ಒಟ್ಟು ಸಮಸ್ಯೆ ಸರ್ಕಾರ ಮುಂದೆ ಇಟ್ಟು ಪರಿಹಾರ ಕಂಡುಕೊಳ್ಳಲು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಿಲೀಪಕುಮಾರ ಉತ್ತಮ ಮಾತನಾಡಿ, ಮಹಿಳೆಯರು ಎಲ್ಲ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಧನೆಯ ಮೂಲಕ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ ಎಂದರು.
ಶ್ರೀ ಬಸವೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ವಿಶೇಷ ಉಪನ್ಯಾಸ ನೀಡಿ, ಮಹಿಳಾ ಅಸ್ಮಿತೆ ಹಾಗೂ ಅಸ್ತಿತ್ವದ ಹುಡುಕಾಟ ಮತ್ತು ಅನುಷ್ಠಾನ ಈ ಕಾಲದಲ್ಲಿ ಪುರುಷ ಮತ್ತು ಸ್ತ್ರೀ ಇಬ್ಬರದೂ ಜಿಜ್ಞಾಸೆಯಾಗಬೇಕು. ವಿದ್ಯೆ ಪದವಿಗಳ ಜತೆಗೆ ವೈಚಾರಿಕ, ವೈಜ್ಞಾನಿಕ ಅರಿವು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.
ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಹಿರಿಯ ಜಾನಪದ ಗಾಯಕಿ ವಡ್ಡಗೆರೆ ಕದರಮ್ಮ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತುಗಾವೆ, ಸಂಘದ ರಾಜ್ಯ ಘಟಕದ ಸದಸ್ಯ ರಾಜಕುಮಾರ ಮಾಳಗೆ, ಜಿಲ್ಲಾ ಖಜಾಂಚಿ ದೇವಪ್ಪ, ಸಂಘದ ತಾಲೂಕು ಗೌರವ ಅಧ್ಯಕ್ಷ ಗೌತಮ ಶಿಂಧೆ ಮಾತನಾಡಿದರು.
ಹುಲಸೂರ ತಹಸೀಲ್ದಾರ್ ಶಿವಾನಂದ ಮೇತ್ರೆ, ಬೀದರ್‌ನ ಕವಯಿತ್ರಿ ಸ್ವರೂಪಾರಾಣಿ ನಾಗೂರೆ, ಡಾ.ಬಾಲಕೃಷ್ಣ ರಾಠೋಡ್, ಮಹಾಲೇಶ, ಶಕೀಲ್ ಅಹ್ಮದ್, ನಾಗರಾಜ ಲಾಡೆ, ಸತೀಶ ಜಾಧವ್, ಖಂಜಾಚಿ ಸುಭಾಷ ಕಾಮಶೆಟ್ಟಿ, ನಿರ್ದೇಶಕರಾದ ಡಾ.ಆನಂದ ಪಾಟೀಲ, ರಾಧಿಕಾ, ರೀಟಾ ಇತರರಿದ್ದರು. ಸಂಘದ ಕಾರ್ಯದರ್ಶಿ ಅಂಬಣ್ಣ ಘಾಂಗ್ರೆ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರಮೇಶ ಉಮಾಪುರೆ ನಿರೂಪಣೆ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.