ವಿಶ್ವ ಅಲ್ಝಮೈರ್ಸ್ ಮಾಸಾಚರಣೆ ಅಂಗವಾಗಿ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮ

Published on

ಮೈಸೂರು: ವಿಶ್ವ ಅಲ್ಝಮೈರ್ಸ್ ಮಾಸಾಚರಣೆ ಅಂಗವಾಗಿ ಅಲ್ಝಮೈರ್ಸ್ ಸಂಬಂಧಿತ ಸಮಸ್ಯೆಗಳ ಭಾರತೀಯ ಸಂಸ್ಥೆಯ ಮೈಸೂರು ಶಾಖೆಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೆ.12ರ ಸಂಜೆ 6 ಗಂಟೆಗೆ ರೋಟರಿ ಮೈಸೂರು ಸಭಾಂಗಣದಲ್ಲಿ ಡೈಮೆನ್ಷಿಯ ಕುರಿತ ಮಾಹಿತಿಯ ವಿಚಾರ ಸಂಕಿರಣ, 13ರಂದು ಸಂಜೆ 6 ಗಂಟೆಗೆ ಜಯನಗರ ರೋಟರಿ ಐವೆರಿಯಲ್ಲಿ ತಮ್ಮನ್ನು ನೆನಪಿಸಿಕೊಳ್ಳದವರನ್ನು ನೆನಪಿಸಿಕೊಳ್ಳಿ ಎಂಬ ವಿಚಾರ ಸಂಕಿರಣ, ಸೆ.15ರಂದು ಬೆಳಗ್ಗೆ 9 ಗಂಟೆಗೆ ಚಾಮುಂಡಿಬೆಟ್ಟದ ಮೆಟ್ಟಿಲು ಬಳಿ ನಮ್ಮ ನಡಿಗೆ ಆರೋಗ್ಯದೆಡೆಗೆ ಎಂಬ ವಾಕಥಾನ್, ಸೆ.16ರಂದು ಸಂವಾದ ಸೇರಿದಂತೆ 21, 26, 29 ಮತ್ತು 30 ರವೆಗೆ ಬೇರೆ ಬೇರೆ ಸ್ಥಳದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ ಎಂದು ಶಾಖೆ ಅಧ್ಯಕ್ಷ ಡಾ.ಹನುಮಂತಾಚಾರ ಜೋಶಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬುದ್ಧಿಮಾಂದ್ಯತೆ ಉಳ್ಳವರಿಗೆ ಅತ್ಯಂತ ಸಾಮಾನ್ಯವಾಗಿ ಅಲ್ಝಮೈರ್ಸ್ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಮಿದುಳಿನ ಅಸಹಜ ಬೆಳವಣಿಗೆಗಳಿಂದ ಇದು ಉಂಟಾಗಲಿದ್ದು, ಈ ಸಮಸ್ಯೆಯಿಂದ ಬಳಲುವವರಿಗೆ ತಮ್ಮ ಬಗ್ಗೆಯಾಗಲಿ, ತಾವು ಯಾವ ಔಷಧ ಸೇವಿಸಬಹುದು ಎಂಬುದಾಗಲಿ ಅರಿವಿರುವುದಿಲ್ಲ ಎಂದರು.
ಇವರನ್ನು ನೋಡಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಅಲ್ಝಮೈರ್ಸ್ ಬಾರದಂತೆ ಕೈಗೊಳ್ಳಬೇಕಾದ ಕ್ರಮ, ಅಂತಹ ಸಮಸ್ಯೆಯಿಂದ ಬಳಲುತ್ತಿರುವವರ ಬಗ್ಗೆ ಇತರರಲ್ಲಿ ಅರಿವು ಮೂಡಿಸುವುದು ಈ ಮಾಸಾಚರಣೆ ಉದ್ದೇಶವಾಗಿದೆ ಎಂದು ತಿಳಿಸಿದರು.
ಶಾಖೆಯ ಪದಾಧಿಕಾರಿಗಳಾದ ಅರುಣ್ ಬೆಳವಾಡಿ, ಡಾ.ಪ್ರತಿಭಾ ಪೆರೇರಾ, ಜಿ.ಎಸ್.ಗಣೇಶ್, ಕೆ.ಆರ್.ಗಣೇಶ್‌ರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net