ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳನ್ನು ಸಂರಕ್ಷಿಸಿ

22rajesh9
Published on

ಚಾಮರಾಜನಗರ: ಸರ್ಕಾರಿ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷಚೇತನರ ಹಕ್ಕುಗಳನ್ನು ರಕ್ಷಣೆ ಮಾಡಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸುಗಮ್ಯ ಯಾತ್ರೆ ಸಮೀಕ್ಷೆ ಹಾಗೂ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳನ್ನು ಸಂರಕ್ಷಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಸರ್ಕಾರವು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ -2016ನ್ನು ಜಾರಿಗೊಳಿಸಿದೆ. ಅದರನ್ವಯ ಸರ್ಕಾರಿ ಕಚೇರಿಗಳು, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷಚೇತನರಿಗೆ ಅವಶ್ಯವಿರುವ ಮೂಲಸೌಲಭ್ಯ ಒದಗಿಸಿ ಅಡೆ-ತಡೆರಹಿತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಸರ್ಕಾರಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ರ‌್ಯಾಂಪ್ ವ್ಯವಸ್ಥೆ, ಮನರಂಜನೆ ಸ್ಥಳಗಳು, ಉದ್ಯಾನವನಗಳು, ಗ್ರಂಥಾಲಯಗಳು, ಮಾರುಕಟ್ಟೆಗಳು, ಪ್ರವಾಸಿ ತಾಣಗಳು, ಸಾರ್ವಜನಿಕ ಶೌಚಾಲಯಗಳು ಸೇರಿದಂತೆ ಇತರೆ ಸ್ಥಳಗಳಲ್ಲಿ ವಿಶೇಷಚೇತನರಿಗೆ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿ ಯಾವುದೇ ಅಡೆ-ತಡೆರಹಿತ ವಾತಾವರಣ ಸೃಷ್ಠಿಸಿ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮೀನಾಕ್ಷಿ ಮಾತನಾಡಿ, ವಿಶೇಷಚೇತನರಿಗೆ ಮೂಲಸೌಕರ್ಯಗಳನ್ನು ಒದಗಿಸಿ ಸರ್ಕಾರಿ ಕಚೇರಿ, ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ವಿಕಲಚೇತನ ವ್ಯಕ್ತಿಗಳ ಸ್ನೇಹಮಯಿ ವ್ಯವಸ್ಥೆಯನ್ನಾಗಿ ರೂಪಿಸಿರುವ ಬಗ್ಗೆ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಂದ ಮಾಹಿತಿ ಕ್ರೋಢಿಕರಿಸಲು ಸಮೀಕ್ಷೆಯನ್ನು ಇಂದಿನಿಂದ ಹಮ್ಮಿಕೊಳ್ಳಲಾಗಿದೆ. ಸರ್ಕಾರವು ಬೆಂಗಳೂರಿನ ಎ.ಪಿ.ಡಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮಾಹಿತಿ ಸಂಗ್ರಹಣೆ ಬಗ್ಗೆ ಸಂಸ್ಥೆಯು ವಿ.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಪುನರ್ವಸತಿ ಕಾರ್ಯಕರ್ತರಿಗೆ ತರಬೇತಿ ನೀಡಲಿದೆ ಎಂದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ವಿ.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಪುನರ್ವಸತಿ ಕಾರ್ಯಕರ್ತರು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net