

ಮೈಸೂರು: ಕನ್ನಡ ಸಾಹಿತ್ಯ ಲೋಕದಲ್ಲಿ ಮುಕ್ತಕ ಸಾಹಿತ್ಯ ವಿಶೇಷ ಸ್ಥಾನಮಾನ ಪಡೆದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ, ಲೇಖಕಿ ಡಾ.ಧರಣಿದೇವಿ ಮಾಲಗತ್ತಿ ಹೇಳಿದರು.
ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್‌ನ ವಾರ್ಷಿಕೋತ್ಸವದ ಅಂಗವಾಗಿ ಸರಸ್ವತಿಪುರಂನ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಲೇಖಕ ಕಿರಣ್ ಸಿಡ್ಲೇಹಳ್ಳಿ ರಚಿತ ಭೋಗಮುಕ್ತಕ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಕೃತಿಯನ್ನು ಬಿಟ್ಟು ಕನ್ನಡ ಸಾಹಿತ್ಯ ಇಲ್ಲ. ಆದ್ದರಿಂದ ಸಂಸ್ಕೃತಿಯಲ್ಲಿ ಬಹಳಷ್ಟು ಮುಕ್ತಕಗಳಿವೆ.
ಕನ್ನಡ ಸಾಹಿತ್ಯದಲ್ಲಿ ಮುಕ್ತಕಗಳು ವಿಶೇಷ ಸ್ಥಾನಮಾನವನ್ನು ಹೊಂದಿವೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಇವುಗಳ ಪರಿಕಲ್ಪನೆ ಇರಲಿದೆ. ಡಿವಿಜಿ ಅವರ ಮುಕ್ತಕ ಮಂಕು ತಿಮ್ಮನ ಕಗ್ಗವನ್ನು ಮಾದರಿಯಾಗಿ ಇಟ್ಟುಕೊಂಡು ಹಲವಾರು ಮುಕ್ತಕ ಕೃತಿಗಳು ಹೊರಬಂದಿವೆ ಎಂದರು.
ನಾವು ಕವಿತೆಗಳನ್ನು ಬರೆಯುವ ಸಂದರ್ಭದಲ್ಲಿ ಛಂದಸ್ಸನ್ನು ಬಿಟ್ಟು ರಗಳೆಗಳ ಸ್ವರೂಪ ಕವಿತೆ ಬರೆದವು. ಆದರೆ, ಲಯ ಇಲ್ಲದೆ ಇದ್ದರೆ ಕಾವ್ಯವಾಗಲ್ಲ. ಹೀಗಾಗಿ ಚಂದೋಬದ್ಧವಾಗಿ, ಲಯ ಬದ್ಧ್ದವಾಗಿ ಸಾಹಿತ್ಯ ಇರಬೇಕು. ಆದರೀಗ ಚಂದೋಬದ್ಧವಾಗಿ ಬರೆಯುವವರ ಸಂಖ್ಯೆ ತಗ್ಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗಮಕಿಗಳು ಪದ್ಯವನ್ನು ಸಂಗೀತಕ್ಕೆ ಅಳವಡಿಸಿಕೊಳ್ಳಬೇಕಾದರೆ ಛಂದಸ್ಸು, ಲಯ ಮುಖ್ಯ. ಒಂದು ವೇಳೆ ಇವೆರಡು ಇಲ್ಲದಿದ್ದರೆ ಕಷ್ಟಪಟ್ಟು ಸಂಗೀತ ಸಂಯೋಜನೆ ಮಾಡಬೇಕಾಗುತ್ತದೆ. ಕೇಳಲು ಕೂಡ ಸೊಗಸಾಗಿ ಇರಲ್ಲ. ಹೀಗಾಗಿ ಚಂದೋಬದ್ಧ್ದ ಮತ್ತು ಲಯ ಬದ್ಧವಾಗಿ ಕಾವ್ಯವನ್ನು ರಚಿಸಬೇಕು ಎಂದರು
ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಸಿ.ವಿ.ಶ್ರೀಧರ ಮೂರ್ತಿ, ವಿದುಷಿ ಶಶಿಕಲಾ ಚಂದ್ರಶೇಖರ್, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಚ್.ವಿ.ನಾಗರಾಜರಾವ್, ಲೇಖಕ ಕಿರಣ್ ಸಿಡ್ಲೇಹಳ್ಳಿ, ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎಸ್.ರಾಮಪ್ರಸಾದ್ ಇದ್ದರು