

ವಿರಾಜಪೇಟೆ: ನಗರ ನೀರು ಸರಬರಾಜು ಮಂಡಳಿ ವತಿಯಿಂದ ಅಮೃತ ಯೋಜನೆಯಡಿ ಕುಡಿಯುವ ನೀರಿನ ಯೋಜನೆ ಜಾರಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ವಿಶೇಷ ಸಭೆಯನ್ನು ಕರೆಯಲು ವಿರಾಜಪೇಟೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಜಲಮಂಡಳಿಯ ಸಹಾಯಕ ಕಾರ್ಯಪಾಲ ಇಂಜಿನಿಯರ್ ಬಿಪಿನ್‌ಚಂದ್ ಮಾತನಾಡಿ, ನಗರ ನೀರು ಸರಬರಾಜು ಮಂಡಳಿಯಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗೆ 65 ಕೋಟಿ ರೂ. ಅನುದಾನ ಮಂಜೂರಾಗಿದೆ. 2002ರಲ್ಲಿ ಬೇತ್ರಿಯ ಕಾವೇರಿ ನದಿಗೆ 45 ಎಚ್‌ಪಿ ಮೋಟಾರು ಅಳವಡಿಸಿ 15 ಸಾವಿರ ಲೀಟರ್ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇಂದಿನ ಜನಸಂಖ್ಯೆಗೆ ಅದು ಸಾಕಾಗುವುದಿಲ್ಲ. 2050ರ ಜನಸಂಖ್ಯೆ ಆಧರಿಸಿ 125 ಎಚ್‌ಪಿ ಮೋಟಾರನ್ನು ಅಳವಡಿಸಿ ನೀರು ಸರಬರಾಜು ಮಾಡುವ ಗುರಿ ಹೊಂದಲಾಗಿದೆ. ಕದನೂರಿನಲ್ಲಿರುವ 2 ಎಕರೆ ಜಾಗದಲ್ಲಿರುವ ಜಾಕ್‌ವೆಲ್ ಬಳಸಿಕೊಳ್ಳಲಾಗುವುದು. ಪಟ್ಟಣದ ಸರ್ಕಾರಿ ಆಸ್ಪತ್ರೆಯ ಬಳಿ ಭೂಮಿಯ ಮೇಲ್ಮಟ್ಟದಲ್ಲಿ ಬೃಹತ್ ಟ್ಯಾಂಕ್ ನಿರ್ಮಿಸಲಾಗುವುದು. ಅರಸು ನಗರದ ಟ್ಯಾಂಕ್ ಅನ್ನು ನವೀಕರಣ ಮಾಡಿದರೆ ಇಡೀ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಈ ಕುರಿತು ಚರ್ಚಿಸಿದ ಸದಸ್ಯರು ಶಾಸಕರ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಲು ತೀರ್ಮಾನಿಸಿದರು.
ದೇಚಮ್ಮ ಮಾತನಾಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದಲ್ಲಿರುವ ಪಟ್ಟಣದ ಒಳಾಂಗಣ ಕ್ರೀಡಾಂಗಣವನ್ನು ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಸರ್ಕಾರ ಬಡ ಮಕ್ಕಳು ಸೇರಿದಂತೆ ಪಟ್ಟಣದ ಸುತ್ತಮುತ್ತಲ ಜನರಿಗೆ ಉಪಯೋಗವಾಗಲಿ ಎಂದು ಒಳಾಂಗಣ ಕ್ರೀಡಾಂಗಣವನ್ನು ನಿರ್ಮಾಣ ಮಾಡಿದೆ. ಖಾಸಗಿ ಸೇವಾ ಸಂಸ್ಥೆ ಪ್ರತಿಯೊಬ್ಬರಿಂದ ಮಾಸಿಕ ತಲಾ 600 ರೂ. ವಸೂಲಿ ಮಾಡುತ್ತಿದೆ. ಕ್ರೀಡಾಂಗಣದ ಸುತ್ತಮುತ್ತ 4 ಬಾಲಕಿಯರ ವಸತಿ ನಿಲಯಗಳಿದ್ದು ಕ್ರೀಡಾಪಟುಗಳಿಗೆ ಒಂದು ಸಮಯ ನಿಗದಿಪಡಿಸಬೇಕು. ಶಾಸಕರು, ಪುರಸಭೆ ಅಧ್ಯಕ್ಷರು, ಸದಸ್ಯರನ್ನೊಳಗೊಂಡ ಮೇಲುಸ್ತುವಾರಿ ಸಮಿತಿ ರಚಿಸಬೇಕು ಎಂದು ತಿಳಿಸಿದರು. ಇದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.
ಆಶಾ ಸುಬ್ಬಯ್ಯ ಮಾತನಾಡಿ, ಕಳೆದ ಸಭೆಯಲ್ಲಿ ತೆಗದುಕೊಂಡ ನಿರ್ಣಯಗಳು ಯಾವುದೂ ಕಾರ್ಯಗತಗೊಂಡಿಲ್ಲ. ಛತ್ರಕೆರೆಯ ಬಳಿ ಇರುವ ಬಯಲು ರಂಗ ಮಂಟಪ, ಕೆರೆಯ ಸುತ್ತಲು ಕಲ್ಲು ಬೆಂಚುಗಳ ಅಳವಡಿಕೆ, ಚಿಕ್ಕಪೇಟೆ ಬೋಪಣ್ಣ ಮನೆ ಬಳಿ ಬಾವಿಗೆ ಮೆಶ್ ಅಳವಡಿಕೆ ಇದ್ಯಾವುದು ಆಗಿಲ್ಲ. ಸೀನಿಯರ್ ಕಾಲೇಜು ಬಳಿ ಇರುವ ನೀರಿನ ಟ್ಯಾಂಕ್‌ನ ಪಕ್ಕದಲ್ಲಿಯೇ ಮಣ್ಣು ಕೊರೆದಿರುವುದರಿಂದ ಟ್ಯಾಂಕ್ ಯಾವಾಗ ಬೀಳುವುದೋ ಎಂದು ಹೇಳಲು ಸಾಧ್ಯವಿಲ್ಲ ಎಂದು ಸಭೆಗೆ ತಿಳಿಸಿದರು.
ಮತೀನ್ ಮಾತನಾಡಿ, ಪುರಸಭೆಯಲ್ಲಿರುವ ಸಕ್ಕಿಂಗ್ ಯಂತ್ರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅದನ್ನು ಮೂರು ವರ್ಷ ಖಾಸಗಿ ಖಾಸಗಿಯವರಿಗೆ ನೀಡಿದರೆ ವಾರ್ಷಿಕ 10ರಿಂದ 15 ಲಕ್ಷ ರೂ.ಆದಾಯ ಬರುತ್ತದೆ ಎಂದರು.
ಆಗ ಚರ್ಚೆ ನಡೆದು, ಪ್ರಥ್ವಿನಾಥ್ ಖಾಸಗಿ ಅವರಿಗೆ ಕೊಡಲು ವಿರೋಧ ವ್ಯಕ್ತಪಡಿಸಿದರು. ಹೊಸ ಸಕ್ಕಿಂಗ್ ಮಿಷನ್ ಬಂದಿದ್ದು ಅದಕ್ಕೆ ದರ ನಿಗದಿ ಮಾಡಿಲ್ಲ. ಖರ್ಚು ವೆಚ್ಚಗಳ ಬಗ್ಗೆ ಸಭೆ ಕರೆದು ತಿರ್ಮಾನ ಮಾಡುವಂತೆ ಮುಖ್ಯಾಧಿಕಾರಿ ಚಂದ್ರಕುಮಾರ್ ಸಭೆಗೆ ತಿಳಿಸಿದರು.
2 ತಿಂಗಳ ಹಿಂದೆ ಪಟ್ಟಣದಲ್ಲಿ ಗಾಂಜಾ ಮಾರುತ್ತಿದ್ದವನ ಬಂಧನವಾಗಿದೆ. ಅವರು ನಡೆಸುತ್ತಿದ್ದ ಫಾಸ್ಟ್‌ಫುಡ್ ಚಾಟಿಂಗ್ ಸೆಂಟರ್‌ನ ಪರವಾನಿಗೆಯನ್ನು ರದ್ದು ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು. ಆದರೆ, ಈವರೆಗೂ ಅವರ ಪರವಾನಗಿ ರದ್ದಾಗಿಲ್ಲ ಎಂದು ಡಿ.ಪಿ.ರಾಜೇಶ್ ಸಭೆ ತಿಳಿಸಿದಾಗ ಮುಖ್ಯಾಧಿಕಾರಿ ಮಾಹಿತಿ ನೀಡಿ, ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಆ ನೋಟಿಸ್‌ಗೆ ಉತ್ತರ ನೀಡಿಲ್ಲ ಎಂದರು. ಆಗ ಕೂಡಲೇ ಕ್ರಮ ಕೈಗೊಳ್ಳುವಂತೆ ಎಲ್ಲ ಸದಸ್ಯರು ಆಗ್ರಹಿಸಿದರು.
ಮಹಮದ್ ರಾಫಿ ಮಾತನಾಡಿ, ಸುಭಾಷ್ ನಗರದದಲ್ಲಿ ಮಳೆಹಾನಿ ಪರಿಹಾರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆಗಲೇ ರಸ್ತೆಗಳ ಮೇಲ್ಪದರ ಕಿತ್ತು ಬಂದಿದೆ. ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿದ್ದಾರೆ. ಅವರ ಇಎಂಡಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ. ರಸ್ತೆಗಳಿಗೆ ಡಾಂಬರೀಕರಣ ಮಾಡಿಸಿ ಎಂದು ಆಗ್ರಹಿಸಿದರು.
ಸಿ.ಕೆ ಪ್ರಥ್ವಿನಾಥ್ ಮಾತನಾಡಿ, ನೂತನ ಅಧಿಸೂಚನೆಯಂತೆ ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ಗಡಿಭಾಗದ ಜಾಗಕ್ಕೆ ಚದರಡಿಗೆ 15 ರೂ.ವಸೂಲಿ ಮಾಡುತ್ತಿದ್ದಾರೆ. ಹಣ ಕೊಡದವರನ್ನು ಪುರಸಭೆ ವ್ಯಾಪ್ತಿಗೆ ಸೇರಿಸುತ್ತಿಲ್ಲ ಎಂದು ಸಭೆಗೆ ತಿಳಿಸಿದರು. ಈ ವಿಚಾರದಲ್ಲಿ ವಿಸ್ತೃತ ಚರ್ಚೆ ನಡೆಯಬೇಕಾದ್ದರಿಂದ ವಿಶೇಷ ಸಭೆ ಕರೆಯಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.
ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋದಾ, ಮುಖ್ಯಾಧಿಕಾರಿ ಚಂದ್ರಕುಮಾರ್, ಇಂಜಿನಿಯರ್ ಹೇಮಕುಮಾರ್ ಉಪಸ್ಥಿತರಿದ್ದರು.