ವಿಶೇಷ ರೈಲಿನಲ್ಲಿ ದಾವಣಗೆರೆಗೆ ಅಭಿಮಾನಿಗಳು

afafa
Published on

ಬೀದರ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿರುವ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಅಭಿಮಾನಿಗಳು ವಿಶೇಷ ರೈಲಿನಲ್ಲಿ ದಾವಣಗೆರೆಗೆ ತೆರಳಿದರು.

ಸಿದ್ದರಾಮಯ್ಯ ಅಮೃತ ಮಹೋತ್ಸವ ಜಿಲ್ಲಾ ಸಮಿತಿಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಅವರ ನೇತೃತ್ವದಲ್ಲಿ ಬೀದರ್, ಔರಾದ್ ಹಾಗೂ ಭಾಲ್ಕಿ ತಾಲ್ಲೂಕುಗಳ ಸುಮಾರು 1,800 ಜನ ರೈಲಿನಲ್ಲಿ ಹೊರಟರು. ರೈಲಿಗೆ ಚಾಲನೆ ನೀಡಿದ ಶಾಸಕ ರಹೀಂಖಾನ್ ಅವರು ಸ್ವತಃ ರೈಲಿನಲ್ಲಿ ಪ್ರಯಾಣ ಬೆಳೆಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ, ಸಚಿವ, ಶಾಸಕರಾಗಿ ನಾಡಿಗೆ ನೀಡಿರುವ ಕೊಡುಗೆ ಬಹು ದೊಡ್ಡದಾಗಿದೆ ಎಂದು ರಹೀಂಖಾನ್ ಸುದ್ದಿಗಾರರಿಗೆ ಹೇಳಿದರು.

ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಬೀದರ್‍ನ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಿದ್ದರು. ಮುಖ್ಯಮಂತ್ರಿಯಾಗಿದ್ದಾಗ ಬೀದರ್‍ಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿದ್ದರು. 750 ಹಾಸಿಗೆಗಳ ಆಸ್ಪತ್ರೆ ಸೇರಿ ಹಲವು ಕೊಡುಗೆಗಳನ್ನು ನೀಡಿದ್ದರು. ಬೀದರ್ ವಿಧಾನಸಭಾ ಕ್ಷೇತ್ರವೊಂದಕ್ಕೇ ಸಾವಿರ ಕೋಟಿ ರೂಪಾಯಿಗೂ ಅಧಿಕ ಅನುದಾನ ಕಲ್ಪಿಸಿದ್ದರು ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದಾಗಲೆಲ್ಲ ಸರ್ವ ಸಮುದಾಯಗಳ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದರು. ಅವರ 75ನೇ ಜನ್ಮದಿನವನ್ನು ಅವಿಸ್ಮರಣೀಯವಾಗಿಸಲು ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧೆಡೆಯ ಲಕ್ಷಾಂತರ ಜನ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಐತಿಹಾಸಿಕವಾಗಲಿದೆ ಎಂದು ಹೇಳಿದರು.

ಮೆರವಣಿಗೆ: ಇದಕ್ಕೂ ಮುನ್ನ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಸೇರಿದ ಸಿದ್ದರಾಮಯ್ಯ ಅವರ ಅಭಿಮಾನಿಗಳು ಸಿದ್ದರಾಮಯ್ಯ ಅಮೃತ ಮಹೋತ್ಸವ ಜಿಲ್ಲಾ ಸಮಿತಿಯ ಮುಂದಾಳತ್ವದಲ್ಲಿ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್‍ಸಿಂಗ್ ವೃತ್ತ, ತಹಶೀಲ್ದಾರ್ ಕಚೇರಿ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ರೈಲು ನಿಲ್ದಾಣಕ್ಕೆ ಬಂದರು. ಬಳಿಕ ಸಾಲಾಗಿ ರೈಲು ಬೋಗಿಗಳನ್ನು ಹತ್ತಿದರು. ರೈಲಿನಲ್ಲಿ ಹರ್ಷೋಲ್ಲಾಸ ಕಂಡು ಬಂದಿತು. ಸಿದ್ದರಾಮಯ್ಯ ಅವರಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮೊಳಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net