

ಮೈಸೂರು: ‘ತಾರೆ ಜಮೀನ್ ಪರ್’ 9ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅಂಗವಿಕಲ ಮಕ್ಕಳ ಸಂಭ್ರಮ ಮೇಳೈಸಿತ್ತು.
ರೋಟರಿ ಮೈಸೂರು ವತಿಯಿಂದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರೆ, ಇವರ ಸಡಗರವನ್ನು ಕಣ್ತುಂಬಿಕೊಂಡ ಪಾಲಕರು ಭಾವುಕರಾದರು.
ನೃತ್ಯ, ಹಾಡುಗಾರಿಕೆ, ಸಂಗೀತ, ಚಿತ್ರಕಲಾ ಸ್ಪರ್ಧೆದಲ್ಲಿ ಪಾಲ್ಗೊಂಡ ವಿಶೇಷ ಮಕ್ಕಳ ಉತ್ಸಾಹ ಕಣ್ಮನ ಸೆಳೆಯಿತು. ಬೆಳಗ್ಗೆಯಿಂದ ಸಂಜೆ ತನಕ ನಡೆದ ಕಾರ್ಯಕ್ರಮದಲ್ಲಿ ನಗರದ 18 ಸಂಸ್ಥೆಗಳ 785 ವಿಶೇಷ ಮಕ್ಕಳು ಸಂತೋಷದಿಂದ ಭಾಗವಹಿಸಿದ್ದರು.
ಕನ್ನಡ ಮತ್ತು ಹಿಂದಿ ಹಾಡುಗಳಿಗೆ ಹೆಜ್ಜೆ ಹಾಕಿದ ಈ ಮಕ್ಕಳ ಲವಲವಿಕೆ, ಪ್ರತಿಭೆಯ ಕುರಿತು ಸಭಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪತ್ರಿಕೋದ್ಯಮಿ ಡಾ.ಕೆ.ಬಿ.ಗಣಪತಿ ಮಾತನಾಡಿ, ಅಂಗವಿಕಲ ಮಕ್ಕಳು ಮಾನವಕುಲದ ನಕ್ಷತ್ರಗಳು. ಅವುಗಳು ಸದಾ ಬೆಳಗಬೇಕು ಎಂದರು. ರೋಟರಿ ಮೈಸೂರು ಅಸಿಸ್ಟೆಂಟ್ ಪ್ರಾಂತಪಾಲ ಚೇತನ್ ವಿಶ್ವನಾಥ್, ಅಧ್ಯಕ್ಷ ಎನ್.ಪ್ರವೀಣ್, ಕಾರ್ಯದರ್ಶಿ ಕೆ.ಎನ್.ಸುಹಾಸ್, ಮುಖಂಡರಾದ ಬಿ.ಎಸ್.ರವಿಕುಮಾರ್, ಕೆ.ಸಿ.ಪೊನ್ನಣ್ಣ ಇನ್ನಿತರರಿದ್ದರು.