

ಚಾಮರಾಜನಗರ: ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ತ್ವರಿತ ನ್ಯಾಯಕ್ಕಾಗಿ ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಶಿಲ್ಪಾನಾಗ್ ಅವರ ಮುಖಾಂತರ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು. ದಲಿತರ ಮೇಲಿನ ದೌರ್ಜನ್ಯ ನಿಯಂತ್ರಣ ಮತ್ತು ತ್ವರಿತ ತನಿಖೆ ಹಾಗೂ ನ್ಯಾಯಕ್ಕಾಗಿ ಜಿಲ್ಲೆಗೊಂದು ಹೊಸ ಪೊಲೀಸ್ ಠಾಣೆ ತೆರೆಯಲು ಸಮಾಜ ಕಲ್ಯಾಣ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಕಡತ ಮಂಡಿಸಿ ಅನುಮೋದನೆ ಕೊಡಿಸಿ ತ್ವರಿತವಾಗಿ ಪ್ರತ್ಯೇಕ ಪೊಲೀಸ್ ಠಾಣೆಗಳನ್ನು ತೆರೆಯಬೇಕು. ಮ್ಯಾನೇಜ್ಮೆಂಟ್ ಕೋಟಾದಲ್ಲಿ ಓದುವ ಹಾಗೂ ಇತರ ತರಬೇತಿ ಪಡೆಯುತ್ತಿರುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್ ಸೌಲಭ್ಯವನ್ನು ಈಗಾಗಲೇ ರದ್ದುಗೊಳಿಸಲಾಗಿದ್ದು, ಅದನ್ನು ಹಿಂಪಡೆದು ವಿದ್ಯಾರ್ಥಿವೇತನ ಹಾಗೂ ಇತರ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ಸರ್ಕಾರದಿಂದ ಸೌಲಭ್ಯವನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಚುನಾವಣೆಯಲ್ಲಿ ಭರವಸೆ ನೀಡಿದ್ದಂತೆ ಸಾವಿರಾರು ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಎಸ್ಸಿ, ಎಸ್ಟಿಗಳಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಬೇಕು. ಕಾಂತರಾಜು ಆಯೋಗದ ವರದಿಯಂತೆ ಒಳ ಮೀಸಲಾತಿ ಹಾಗೂ ಜಾತಿ ಜನಗಣತೆಯ ಜಾರಿ ಮಾಡಬೇಕು. ಎಸ್‌ಸಿಪಿ, ಟಿಎಸ್‌ಪಿ ಅನುದಾನ ಅನ್ಯ ಉದ್ದೇಶಕ್ಕೆ ಬಳಸದಂತೆ 7ಇ ಕಾಯ್ದೆಯನ್ನು ರದ್ದುಗೊಳಿಸುವುದು, ಎಸ್‌ಇಪಿ, ಟಿಎಸ್‌ಪಿ ಫಲಾನುಭವಿಗಳ ಯೋಜನೆಯಲ್ಲಿ ಫಲಾನುಭವಿಗಳನ್ನು ರೂಪಿಸುವಾಗ ಪ್ರತಿ ಸಲ 50 ಆಧಾರಿತ ಯೋಜನೆ ರೂಪಿಸಬೇಕು ಎಂದರು.
ಎಸ್ಸಿ, ಎಸ್ಟಿ ಮಕ್ಕಳುಗಳು ಖಾಸಗಿ ಶಾಲಾ-ಕಾಲೇಜುಗಳು ಹಾಗೂ ವಿವಿಧ ತರಬೇತಿಗಳಲ್ಲಿ ಪ್ರವೇಶ ಪಡೆಯುವಾಗ ಪೂರ್ಣ ಶುಲ್ಕವನ್ನು ಸರ್ಕಾರವೇ ಪಾವತಿಸಬೇಕು ಎಂದು ಒತ್ತಾಯಿಸಿದರು. ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಜಿಲ್ಲಾ ಸಂಚಾಲಕ ಕೆ.ವೀರು, ಜಿಲ್ಲಾ ಸಂಘಟನಾ ಸಂಚಾಲಕರಾದ ಹಿಂಡಯ್ಯ, ಮಹದೇವಸ್ವಾಮಿ ಉಮ್ಮತ್ತೂರು, ನಾಗಣ್ಣ ಹನೂರು, ಕುಮಾರ್, ಉಪ ಸಂಚಾಲಕ ನಂಜುಡಯ್ಯ, ಹನೂರು ತಾಲೂಕು ಸಂಚಾಲಕ ಮಾದೇಶ್, ಯಳಂದೂರು ತಾಲೂಕು ಸಂಚಾಲಕ ರಾಚಪ್ಪ, ಗುಂಡ್ಲುಪೇಟೆ ತಾಲೂಕು ಸಂಚಾಲಕ ಶಿವಣ್ಣ, ದೊಡ್ಡಯ್ಯ, ರವಿಕುಮಾರ್, ಬಸವರಾಜು, ಮುರುಗೇಶ್, ಮಾದಯ್ಯ, ನಂಜೇಶ್ ಇದ್ದರು.