

ಹಾಸನ: ವಿಶೇಷ ಚೇತನರಿಗೆ ಸರ್ಕಾರ ಉದ್ಯೋಗದಲ್ಲಿ ಮೀಸಲಾತಿ ಮತ್ತು ಉಚಿತ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ನಿಯಮ ರೂಪಿಸಬೇಕು ಎಂದು ನ್ಯಾಯಾಧೀಶ ಬಿ.ಕೆ. ರವಿಕಾಂತ್ ಹೇಳಿದರು.
ನಗರದ ಸಾಲಗಾಮೆ ರಸ್ತೆಯಲ್ಲಿರುವ ಎಂ ಕೃಷ್ಣ ಅಂಧ ಮಕ್ಕಳ ಶಾಲೆಯಲ್ಲಿ ಕರ್ನಾಟಕ ಅಂಧರ ಒಕ್ಕೂಟದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಚೇತನರಿಗೆ ಕಾನೂನು ಹಕ್ಕುಗಳ ಬಗ್ಗೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷ ಚೇತನರು ಕೂಡ ಸಮಾಜದ ಒಂದು ಅಂಗವಾಗಿದ್ದು ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಅವರಲ್ಲಿ ಇರುವಂತಹ ಕೌಶಲವನ್ನು ಹೊರ ತೆಗೆಯಲು ನಾವೆಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ನಮ್ಮ ದೇಶದ ಕಾನೂನು ಸಂಪೂರ್ಣವಾಗಿ ಸಂವಿಧಾನದ ಆಶಯದ ಮೇಲೆ ರಚನೆಯಾಗಿದೆ. ಇಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಲಾಗಿದೆ. ಅವುಗಳನ್ನು ಯಾರೇ ಉಲ್ಲಂಘಿಸಿದರೆ ಕಾನೂನಿನಡಿ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಯಾವುದೇ ರೀತಿಯ ಶೋಷಣೆ ಮತ್ತು ದೌರ್ಜನ್ಯ ನಡೆಯದಂತೆ ಸರ್ಕಾರ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಇನ್ನೂ 85,000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಇದಕ್ಕಾಗಿ ವಿಶೇಷ ನ್ಯಾಯಾಲಯವು ಕೂಡ ಸ್ಥಾಪನೆಯಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ ಅಂಗವಿಕಲ ಮಕ್ಕಳನ್ನು ದೇವರೆಂದು ಭಾವಿಸಬೇಕು. ಅವರಿಗೆ ವಿಶೇಷವಾದಂತಹ ಚೈತನ್ಯವಿದೆ. ಅವರನ್ನು ಕೂಡ ನಾವು ಸಮಾನರಂತೆ ಕಾಣಬೇಕು. ಅಂಧ ಮಕ್ಕಳು ದೇವರಿಗೆ ಸಮಾನ. ಅವರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನಾವೆಲ್ಲರೂ ಅವರಿಗೆ ಸಹಕಾರ ನೀಡಬೇಕು. ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾನೂನು ಇರುವುದು ದುರ್ಬಲರ ರಕ್ಷಣೆಗಾಗಿ. ಆದರೆ ಹಾಲು ಕೊಡುವ ತಾಯಿಯೇ ವಿಷ ಕೊಟ್ಟರೆ ಹೇಗೋ ಹಾಗೆ ಕಾನೂನು ಪಾಲಕರು ದಾರಿ ತಪ್ಪಿದರೆ ದೇಶದ ಸ್ಥಿತಿ ಮತ್ತು ಕಾನೂನು ಸಂಪೂರ್ಣವಾಗಿ ಹದಗೆಡುತ್ತದೆ. ದೇಶದ ಕಾನೂನನ್ನು ಎತ್ತಿ ಹಿಡಿದು ರಕ್ಷಿಸುವವರೇ ದುರ್ಬಲರಾದರೆ ಜನಸಾಮಾನ್ಯರ ಗತಿ ಏನು. ಪ್ರಸ್ತುತ ಎಲ್ಲಾ ವಲಯಗಳು ಕೂಡ ಕಲುಷಿತಗೊಳ್ಳುತ್ತಿವೆ. ಇದು ಸಮಾಜಕ್ಕೆ ಮಾರಕವಾಗಿದೆ. ಮುಂದಿನ ಯುವಪೀಳಿಗೆಗೆ ನಾವು ಏನನ್ನು ಕೊಡುಗೆ ನೀಡುತ್ತಿದ್ದೇವೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಇದೇ ರೀತಿ ಮುಂದುವರೆದರೆ ದೇಶದ ಸ್ಥಿತಿ ಎಲ್ಲಿಗೆ ತಲುಪುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವಿನಾಕಲಗೂಡು, ಹಿಮ್ಸ್ ನಿರ್ದೇಶಕ ಡಾ. ಸಂತೋಷ್, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ. ಮದನ್ ಗೌಡ, ಹಿರಿಯ ಪತ್ರಕರ್ತ ವೆಂಕಟೇಶ್, ಕರ್ನಾಟಕ ಅಂಧರ ಒಕ್ಕೂಟದ ಅಧ್ಯಕ್ಷ ಬಿ.ಕೆ. ಮಂಜುನಾಥ್, ತಮ್ಮಯ್ಯ, ಹಿರಿಯ ಸಾಹಿತಿ ಚಂದ್ರಕಾಂತ್ ಪಡೆಸೂರ, ಕಾಂಗ್ರೆಸ್ ಮುಖಂಡ ಪ್ರಸನ್ನ ಹಾಜರಿದ್ದರು.