

ಕಾರವಾರ: ಮುಂದಿನ ವಾರದ ನಾಲ್ಕು ದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದರು. ಆದರೆ, ಅದು ಬಹುತೇಕ ನಗರ ಹಾಗೂ ಗ್ರಾಪಂಗಳಿಗೆ ಅನ್ವಯವಾಗುತ್ತಿಲ್ಲ. ವಿಶೇಷ ಕಂಟೇನ್ಮೆಂಟ್ ವಲಯ ಎಂದು ಘೊಷಿಸಿದ ಪ್ರದೇಶದಲ್ಲಿ ನಿರ್ಬಂಧ ವಿಧಿಸುವ ಅಥವಾ ತೆರೆಯುವ ಅಧಿಕಾರವನ್ನು ಜಿಲ್ಲಾಧಿಕಾರಿ ಆಯಾ ತಹಸೀಲ್ದಾರರಿಗೆ ನೀಡಿದ್ದಾರೆ. ಇದುವರೆಗೆ ಇದ್ದ ಕಂಟೇನ್ಮೆಂಟ್ ಪ್ರದೇಶಗಳನ್ನು ಜೂನ್ 7 ರವರೆಗೆ ಮುಂದುವರಿಸಿ ಬಹುತೇಕ ತಹಸೀಲ್ದಾರರು ಆದೇಶ ಹೊರಡಿಸಿದ್ದಾರೆ. ಇದರಿಂದ ಅರ್ಧ ಜಿಲ್ಲೆ ಸೋಮವಾರದಿಂದಲೂ ಸಂಪೂರ್ಣ ಲಾಕ್ ಆಗಿಯೇ ಇರಲಿದೆ.
ಇದುವರೆಗೆ ಜಿಲ್ಲೆಯ 7 ಶಹರಗಳು ಹಾಗೂ 57 ಗ್ರಾಪಂಗಳನ್ನು ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲಾಗಿತ್ತು. ಅದರಲ್ಲಿ ಯಲ್ಲಾಪುರ ಹೊರತುಪಡಿಸಿ ಉಳಿದೆಲ್ಲ ಶಹರಗಳನ್ನು ಕಂಟೇನ್ಮೆಂಟ್ ವಲಯ ಎಂದು ಜೂ. 7 ರವರೆಗೂ ಮುಂದುವರಿಸಿ ಎಲ್ಲ ತಹಸೀಲ್ದಾರರು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಆ ಎಲ್ಲ ಪ್ರದೇಶಗಳಲ್ಲಿ ಜೂ. 7 ರವರೆಗೂ ಯಾವುದೇ ಅಂಗಡಿ ತೆರೆಯಲು ಅವಕಾಶವಿಲ್ಲ. ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶವಿರುವುದಿಲ್ಲ. ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ಹಾಲು ಮುಂತಾದವನ್ನು ಮನೆ, ಮನೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಹಸೀಲ್ದಾರ್ಗಳು ಆದೇಶದಲ್ಲಿ ತಿಳಿಸಿದ್ದಾರೆ. ವಿವಿಧೆಡೆ ತಹಸೀಲ್ದಾರರು ವ್ಯಾಪಾರಸ್ಥರ ಸಭೆ ನಡೆಸಿ ಅಗತ್ಯ ವಸ್ತುಗಳನ್ನು ಮನೆಗಳಿಗೆ ಪೂರೈಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಕಂಟೇನ್ಮೆಂಟ್ ಬಿಟ್ಟು ಉಳಿದ ಪ್ರದೇಶಗಳಿಗೆ ಗುರುವಾರದ ಜಿಲ್ಲಾಧಿಕಾರಿ ಆದೇಶ ಅನ್ವಯವಾಗಲಿದೆ. ಆ ಎಲ್ಲ ಕಡೆ ಸೋಮವಾರದಿಂದ ಗುರುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ತರಕಾರಿ, ಹಣ್ಣು, ಕಿರಾಣಿ, ಲಿಕ್ಕರ್, ನಿರ್ಮಾಣ ಸಾಮಗ್ರಿ, ಕೃಷಿ ಪರಿಕರಗಳ ಅಂಗಡಿ ತೆರೆಯಲು ಅವಕಾಶ ನೀಡಲಾಗುತ್ತಿದೆ.
ಯಲ್ಲಾಪುರ ಪಟ್ಟಣ ಪಂಚಾಯಿತಿಯನ್ನು ಕಂಟೇನ್ಮೆಂಟ್ ವಲಯ ಎಂದು ಘೊಷಿಸಲಾಗಿದ್ದು, ಅದರ ಅವಧಿ ಇನ್ನು 6 ದಿನಕ್ಕೆ ಮುಕ್ತಾಯವಾಗಲಿದೆ. ವಿವಿಧ ಗ್ರಾಪಂಗಳ ಕಂಟೇನ್ಮೆಂಟ್ ಅವಧಿ ಒಂದೆರಡು ದಿನದಲ್ಲಿ ಮುಕ್ತಾಯವಾಗುತ್ತಿದೆ. ಕೋವಿಡ್ ಹರಡುವ ಪ್ರಮಾಣವನ್ನು ಪರಿಗಣಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್ ತಿಳಿಸಿದ್ದಾರೆ.
ಸದ್ಯದ ನಿರ್ಬಂಧಿತ ಪ್ರದೇಶಗಳು
ಹಳಿಯಾಳ, ಮುಂಡಗೋಡ ಪೂರ್ಣ ತಾಲೂಕು
ಕಾರವಾರ ನಗರ ಹಾಗೂ 4 ಗ್ರಾಪಂಗಳು
ದಾಂಡೇಲಿ ನಗರ ಹಾಗೂ 2 ಗ್ರಾಪಂಗಳು
ಯಲ್ಲಾಪುರ ಪಟ್ಟಣ ಮತ್ತು 8 ಗ್ರಾಪಂಗಳು
ಜೊಯಿಡಾ ಪಟ್ಟಣ ಮತ್ತು 4 ಗ್ರಾಪಂಗಳು
ಶಿರಸಿ ನಗರ
ಸಿದ್ದಾಪುರ ಪಟ್ಟಣ
ವಿನಾಯಿತಿ ಇರುವ ಪ್ರದೇಶಗಳು
ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಜಾಲಿ ಪಟ್ಟಣಗಳು
ಕಂಟೇನ್ಮೆಂಟ್ ಎಂದು ಘೊಷಣೆ ಮಾಡದ 173 ಗ್ರಾಮ ಪಂಚಾಯಿತಿಗಳು