ವಿಶಾಲ ಬುದ್ಧಿ ಹೊಂದಲು ಆದ್ಯತೆ ನೀಡಿ| ವಿದ್ಯಾಭೂಷಣ ಮುನಿಮಹಾರಾಜರ ಅಭಿಮತ

Vidyabhushana Munimaharaja, Dharmasabha, Muddebihala, Padmavati Devi, Mahayakshi,
ಮುದ್ದೇಬಿಹಾಳ ಪಟ್ಟಣದ ಗಣಪತರಾವ್ ಗಂಗಾರಾಮ್ ಹಜಾರೆ ಸಭಾಮಂಟಪದಲ್ಲಿ ಸಿದ್ದಪ್ಪ ಚಲವಾದಿ, ಬಸವರಾಜ ಕುಂಬಾರ, ಸಮ್ಮೇದ ವಂದಕುದರಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಭೂಷಣ ಮುನಿಮಹಾರಾಜರು, ಅಭಿನಂದನ ಗೋಗಿ, ಮಾಣಿಕಚಂದ ದಂಡಾವತಿ, ಅಶೋಕ ಮಣಿ, ಬಾಹುಬಲಿ ಗೋಗಿ, ರಾಜು ದಂಡಾವತಿ, ಪಿ.ಎ.ಕುಲಕರ್ಣಿ, ಜಿನದತ್ತ ಅಲದಿ, ಗೊಮ್ಮಟೇಶ ಸಗರಿ ಇತರರಿದ್ದರು.
Published on

ಮುದ್ದೇಬಿಹಾಳ: ಅಮ್ಮ, ಅಪ್ಪ ಸಂಸ್ಕೃತಿ ಇರಲಿ, ಮಮ್ಮಿ ಡ್ಯಾಡಿ ಸಂಸ್ಕೃತಿ ಬೇಡ. ಭಾಷಾ ಸಂಸ್ಕಾರ ಇಲ್ಲದ ಮೇಲೆ ಧರ್ಮ ಸಂಸ್ಕಾರ ಎಲ್ಲಿರುತ್ತೆ. ದೇವಸ್ಥಾನಗಳಿಗೆ ಯಾವತ್ತೂ ಖಾಲಿ ಕೈಯಲ್ಲಿ ಹೋಗಬಾರದು. ಏನಾದರೂ ದಾನ ಹಾಕಿದರೆ ಅದು ಮರಳಿ ಬರುತ್ತದೆ ಎಂದು ವಿದ್ಯಾಭೂಷಣ ಮುನಿಮಹಾರಾಜರು ನುಡಿದರು.

ಪಟ್ಟಣದ ಹೊರವಲಯದಲ್ಲಿರುವ ಮಹಾಯಕ್ಷಿ ಪದ್ಮಾವತಿ ದೇವಿಯ ಜಾತ್ರೋತ್ಸವ, ಮಹಾರಥೋತ್ಸವ ನಿಮಿತ್ತ ಗಣಪತರಾವ್ ಗಂಗಾರಾಮ್ ಹಜಾರೆ ಸಭಾಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಧರ್ಮಸಭೆ, ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಾವು ಮಾಡುವ ಪ್ರತಿ ಸಣ್ಣ ಉಪಕಾರಕ್ಕೂ ಮಹತ್ವ ಇದೆ. ಅದರಿಂದ ದೊರಕುವ ಪುಣ್ಯ ಬಡ್ಡಿ, ಚಕ್ರಬಡ್ಡಿ ಸಮೇತ ಮರಳಿ ಬರುತ್ತದೆ. ಮನುಷ್ಯನನ್ನು, ಶರೀರವನ್ನು ಸೃಷ್ಟಿಸುವ ಶಕ್ತಿ ಯಾರಿಗೂ ಬಂದಿಲ್ಲ. ಮನುಷ್ಯ ವಿಶಾಲವಾದ ಬುದ್ಧಿ ಹೊಂದಿರಬೇಕು ಎಂದರು.

ಮುಖ್ಯ ಅತಿಥಿ- ಬಸವನಬಾಗೇವಾಡಿ ಡಿವೈಎಸ್ಪಿ ಬಾಳಪ್ಪ ನಂದಗಾಂವಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸಬೇಕು. ಜೈನ ಧರ್ಮದ ಹಿರಿಯರು ತಮ್ಮ ಮಕ್ಕಳಿಗೆ ಜೈನಧರ್ಮದ ತತ್ವಗಳ ಬಗ್ಗೆ ತಿಳಿಸಿಕೊಡಬೇಕು. ವಿದ್ಯೆಗಿಂತ ಬುದ್ಧಿ ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತಿರಬೇಕು. ಒಳ್ಳೆ ವಿದ್ಯೆ ಇದ್ದರೂ ಬುದ್ಧಿ ಇರದಿದ್ದರೆ ಆತ ಸಮಾಜಕ್ಕೆ ಉಪಯುಕ್ತನಾಗಲ್ಲ ಎಂದರು.

ಗದಗ ಜಿಲ್ಲಾ ದಿಗಂಬರ ಜೈನ ಸಮಾಜದ ಅಧ್ಯಕ್ಷ- ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಎ.ಕುಲಕರ್ಣಿ ಮಾತನಾಡಿ, ಜೈನ ಧರ್ಮ, ಸಮಾಜ, ಪರಂಪರೆ ಉಳಿವಿಗೆ ಎಲ್ಲರೂ ಚಿಂತನೆ ನಡೆಸಬೇಕು. ಧರ್ಮ ಸಭೆಗಳು ಹೆಚ್ಚೆಚ್ಚು ನಡೆಯಬೇಕು. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಪ್ರತಿಯೊಬ್ಬರಿಗೂ ಧರ್ಮಾಭಿಮಾನ ಇರಬೇಕು. ಜೈನರು ಅಲ್ಪಸಂಖ್ಯಾತರಾಗಿದ್ದರೂ ಸವಲತ್ತು ಪಡೆಯುವವರು ಕಡಿಮೆ. ಅಂಥವರನ್ನು ಗುರುತಿಸಿ ಸೌಲಭ್ಯ ಕೊಡಿಸುವ ಕೆಲಸ ಮುಖ್ಯಸ್ಥರಿಂದ ಆಗಬೇಕು ಎಂದರು.

ಮುದ್ನಾಳ ಪಾರ್ಶ್ವನಾಥ ತೀರ್ಥಂಕರ, ಪದ್ಮಾವತಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಅಭಿನಂದನ್ ಗೋಗಿ ಅಧ್ಯಕ್ಷತೆ ವಹಿಸಿದ್ದರು. ಕಮಿಟಿ ಉಪಾಧ್ಯಕ್ಷ ಗೊಮ್ಮಟೇಶ ಸಗರಿ, ಸಹಕಾರಿ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಜಿನದತ್ತ ಅಲದಿ, ಚಲನಾ ದಂಡಾವತಿ, ಭಾವನಾ ದಂಡಾವತಿ, ಮೇಘಾ ದಂಡಾವತಿ, ಅಕ್ಷತಾ ದಂಡಾವತಿ ಸ್ವಾಗತ ಗೀತೆ ನಡೆಸಿಕೊಟ್ಟರು.

ವಿವಿಧ ಕ್ಷೇತ್ರಗಳ ಸಾಧಕರಾದ ಅಜಿತ ವಂದಕುದರಿ, ಅನಿಲಕುಮಾರ ಇರಾಜ, ವಿದ್ಯಾಧರ ಯಾದಗಿರಿ, ಚೂಡಪ್ಪ ಮುತ್ತಿನ, ಸಮ್ಮೇದ ವಂದಕುದರಿ, ಪತ್ರಕರ್ತರಾದ ಬಸವರಾಜ ಕುಂಬಾರ, ಸಿದ್ದು ಚಲವಾದಿ ಮತ್ತು ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಣವಿ ದಂಡಾವತಿ ಭರತನಾಟ್ಯ ಪ್ರದರ್ಶನ ಮಾಡಿದರು. ರಾಜು ದಂಡಾವತಿ ಸ್ವಾಗತಿಸಿದರು. ಅಶೋಕ ಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಾ ಗೋಂಗಡಿ ನಿರೂಪಿಸಿದರು. ಬಾಹುಬಲಿ ಗೋಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net