‘ವಿವೇಕಾನಂದರ’ಮೂರ್ತಿ ಇಲ್ಲಿದೆ ನೋಡಿ ‘ಸ್ವಾಮಿ’

9 vikram 14
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ಸರ್ಕಾರಗಳು ಕೋಟ್ಯಂತರ ರೂ. ವ್ಯಯಿಸಿ ಅದ್ದೂರಿಯಾಗಿ ರಾಷ್ಟ್ರೀಯ ಯುವ ಜನೋತ್ಸವ ಆಯೋಜಿಸಿವೆ. ಆದರೆ ಆತಿಥೇಯ ನಗರದಲ್ಲಿನ ಏಕೈಕ ವಿವೇಕಾನಂದರ ವೃತ್ತದ ನಿರ್ಲಕ್ಷೃ ಜನರ ಕಂಗೆಣ್ಣಿಗೆ ಗುರಿಯಾಗಿದೆ.
ನಗರದ ಮಧ್ಯವರ್ತಿ ಸ್ಥಳದಲ್ಲಿ ವಿವೇಕಾನಂದ ವೃತ್ತ ಇದೆ. ಹಲವಾರು ವರ್ಷ ವೃತ್ತದಲ್ಲಿ ಯಾವುದೇ ಮೂರ್ತಿ ಇರಲಿಲ್ಲ. ವೃತ್ತದ ಅಂದ ಹೆಚ್ಚಿಸಲು ಅಂದಾಜು 2012ರಲ್ಲಿ ಅತ್ಯಂತ ಸುಂದರವಾದ ವಿವೇಕಾನಂದ ಮೂರ್ತಿ ಸ್ಥಾಪಿಸಲಾಗಿದೆ. ಆದರೆ ವಿವೇಕಾನಂದ ಜಯಂತಿ ಬಂದಾಗ ಮಾತ್ರ ಪಾಲಿಕೆ ಈ ಸ್ಥಳ ನೆನಪಾಗುತ್ತದೆ.
ಇದೀಗ ವಿವೇಕಾನಂದ ಜಯಂತಿ ನಿಮಿತ್ತ ಏರ್ಪಡಿಸಿರುವ ಯುವ ಜನೋತ್ಸವ ಸಂದರ್ಭದಲ್ಲೂ ಪಾಲಿಕೆ ಅಧಿಕಾರಿಗಳು ವೃತ್ತದ ಸ್ವಚ್ಛತೆ, ಅಲಂಕಾರಕ್ಕೆ ಆಸಕ್ತಿ ತೋರದೆ ಅಸಡ್ಡೆ ತೋರಿದ್ದಾರೆ. ಅಧಿಕಾರಿಗಳಿಗೆ ವಿವೇಕಾನಂದರ ಬಗ್ಗೆ ಇರುವ ಭಾವನೆಗೆ ಇದು ಸಾಕ್ಷಿ ಾದಂತಾಗಿದೆ.
ಉದ್ಯಾನ ಒಂದಿಷ್ಟೂ ನಿರ್ವಹಣೆ ಆಗದೇ ಆವರಣ ತುಂಬ ಕಸದ ರಾಶಿ, ಮದ್ಯದ ಬಾಟಲಿಗಳು ಕಣ್ಣಿಗೆ ರಾಚುತ್ತಿವೆ. ರಾತ್ರಿ ಸಮಯದಲ್ಲಿ ಮೂರ್ತಿ ಕಾಣುವಂತೆ ವಿದ್ಯುತ್ ವ್ಯವಸ್ಥೆ ಇಲ್ಲ. ವೃತ್ತದಲ್ಲಿನ ಕಾರಂಜಿ ನೀರಿಲ್ಲದೆ ಒಣಗಿದೆ. ವೃತ್ತದ ಗ್ರಿಲ್‌ಗಳು ಬಣ್ಣ ಕಾಣದೆ ಹಲವು ವರ್ಷಗಳೇ ಸಂದಿದ್ದರೂ, ಅದನ್ನು ಮರೆ ಮಾಚಲು ರಾಜಕಾರಣಿಗಳ ಶುಭಾಶಯ ಫಲಕಗಳು ಕಾವಲಿಗೆ ಇರುತ್ತವೆ. ಸದ್ಯ ಸಹ ಮೇಯರ್ ಈರೇಶ ಅಂಚಟಗೇರಿ ಜನ್ಮದಿನಕ್ಕೆ ಶುಭ ಕೋರಿದ ಬ್ಯಾನರ್ ರಾರಾಜಿಸುತ್ತಿದೆ.
ಯುವ ಜನೋತ್ಸವಕ್ಕೆ ಹಣ ವ್ಯಯಿಸಿ ನಗರದಲ್ಲಿನ ರಸ್ತೆಗಳ ದುರಸ್ತಿ, ದೀಪಾಲಂಕಾರ, ಗೋಡೆಗಳ ಮೇಲೆ ಚಿತ್ರ ಬಿಡಿಸಿ ನಗರ ಸೌಂದರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಆದರೆ ನಗರದ ಮಧ್ಯವರ್ತಿ ಸ್ಥಳದಲ್ಲಿರುವ ಈ ವೃತ್ತಕ್ಕೆ ಅತಿಥಿಗಳು ಹೋಗುವುದಿಲ್ಲ. ಮೂರ್ತಿ ನೋಡುವವರು ಯ್ಯರು? ಅತಿಥಿಗಳು ಓಡಾಡುವ ಸ್ಥಳ ಮಾತ್ರ ಚೆಂದ ಕಂಡರೆ ಸಾಕು ಎಂಬ ಮನೋಭಾವ ಅಧಿಕಾರಿಗಳಲ್ಲಿದೆ ಎಂಬುದು ಸ್ಪಷ್ಟವಾದಂತಿದೆ.
ಅಧಿಕಾರಿಗಳು ಈ ಅಸಡ್ಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಯುವ ಜನೋತ್ಸವ ಮಾತ್ರವಲ್ಲ ಸದಾ ಕಾಲ ವೃತ್ತ ನೋಡುಗರ ಮನ ಸೆಳೆಯುವಂತಿರಬೇಕು. ವೃತ್ತದಲ್ಲಿ ಮೊದಲು ಬ್ಯಾನರ್ ಅಳವಡಿಕೆಗೆ ನಿಷೇಧ ಹೇರಬೇಕಲ್ಲದೆ, ರಾತ್ರಿ ಸಮಯದಲ್ಲಿ ಬಣ್ಣ ಬಣ್ಣದ ಕಾರಂಜಿ ಕಂಡು ಜನ ಖುಷಿ ಪಡುವಂತಾಗಬೇಕು. ವೃತ್ತದ ಸುತ್ತ ವಿವೇಕಾನಂದ ಸಂದೇಶಗಳನ್ನು ಅಳವಡಿಸಿದರೆ, ಅಂದದ ಜತೆಗೆ ಜನರಿಗೆ ಸದಾ ಪ್ರೇರಣೆ ನೀಡುವ ಸ್ಥಳವೂ ಆಗಲಿದೆ ಎಂಬುದು ಜನರ ಆಶಯ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ವಿವೇಕಾನಂದ ವೃತ್ತ ಅಂದಗಾಣಿಸಿ ಜನ ಮೆಚ್ಚುವ ಕಾರ್ಯಕ್ಕೆ ಮುಂದಾಗುವರೇ ಕಾದು ನೋಡಬೇಕಿದೆ.
----ಕೋಟ್---
ನಗರದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಏರ್ಪಡಿಸಿದ್ದು ಹೆಮ್ಮೆಯ ಸಂಗತಿ. ಆದರೆ ನಗರದ ಮಧ್ಯವರ್ತಿ ಸ್ಥಳದಲ್ಲಿರುವ ಸ್ವಾಮಿ ವಿವೇಕಾನಂದರ ಭವ್ಯ ಮೂರ್ತಿಯನ್ನೇ ಕಡೆಗಣಿಸಲಾಗಿದೆ. ವೃತ್ತದ ಸುತ್ತ ಸದಾ ಬ್ಯಾನರ್‌ಗಳನ್ನು ಅಳವಡಿಸಿ ಅಂದಗೆಡುವಂತಾಗಿದೆ. ವೃತ್ತವನ್ನು ಯುವ ಜನೋತ್ಸವ ಸಂದರ್ಭದಲ್ಲಿ ಮಾತ್ರವಲ್ಲದೆ, ಸದಾ ಕಾಲ ಅಂದಗಾಣಿಸುವಂತೆ ಮಾಡಬೇಕು.

  • ಉದಯ ಯಂಡಿಗೇರಿ, ವ್ಯಾಪಾರಸ್ಥ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net