

ಪಾಂಡವಪುರ: ಯುವಜನತೆಗೆ ಸ್ಫೂರ್ತಿಯ ಚಿಲುವೆಯಂತಿದ್ದ ವಿವೇಕಾನಂದರ ಚಿಂತನೆ ಮತ್ತು ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಮೇಲುಕೋಟೆ ಪೊಲೀಸ್ ಇನ್ಸ್‌ಪೆಕ್ಟರ್ ಸುಮಾರಾಣಿ ತಿಳಿಸಿದರು.
ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ವಿವೇಕಾನಂದರ ಜೀವನ ಸಂದೇಶ ಸಹಕಾರಿಯಾಗಿದೆ ಎಂದು ತಿಳಿಸಿದರು.
ಎಸ್‌ಟಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ .ಶಿವರಾಜು ಅವರ ಅಭಿಲಾಷೆಯಂತೆ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸಬೇಕೆಂಬ ಉದ್ದೇಶದಿಂದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಜಿಲ್ಲೆಯ 45ಕ್ಕೂ ಹೆಚ್ಚು ಕಾಲೇಜಿನಲ್ಲಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್‌ಟಿಜಿ ಕಾಲೇಜಿನ ವಿದ್ಯಾರ್ಥಿಗಳೇ ಆಯಾ ಪದವಿಪೂರ್ವ ಕಾಲೇಜಿನಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿ ಅಂತಿಮ ಸುತ್ತಿಗೆ ಪ್ರತಿ ಕಾಲೇಜಿನಿಂದ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಹಂತದಲ್ಲಿ ಆಯ್ಕೆಯಾದ 262 ವಿದ್ಯಾರ್ಥಿಗಳಿಗೆ ಕಾಲೇಜಿನ ಆವರಣದಲ್ಲಿ ಅಂತಿಮ ಸುತ್ತಿನ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಸರ್ಕಾರಿ ಪದವಿಪೂರ್ವ ಕಾಲೇಜು ಮಂಡ್ಯ, ಎಂ.ಎಸ್. ಉದಯ್‌ಕುಮಾರ್ ಪ್ರಥಮ ಬಹುಮಾನ 5 ಸಾವಿರ ರೂ. ನಗದು ಬಹುಮಾನ, ಎಂ. ರಕ್ಷಿತಾ, ಸರ್ಕಾರಿ ಪದವಿಪೂರ್ವ ಕಾಲೇಜು ಪಾಂಡವಪುರ ದ್ವಿತೀಯ ಬಹುಮಾನ 3 ಸಾವಿರ ರೂ., ಸರ್ಕಾರಿ ಪದವಿ ಪೂರ್ವ ಕಾಲೇಜು ಬಲ್ಲೇನಹಳ್ಳಿ ಎಂ.ಪಿ.ಹರ್ಷಿತ್‌ಗೌಡ ಅವರಿಗೆ ತೃತೀಯ ಬಹುಮಾನ 2 ಸಾವಿರ ರೂ. ನಗದು ಬಹುಮಾನದ ಜತೆಗೆ ಪಾರಿತೋಷಕ ನೀಡಿ ಗೌರವಿಸಲಾಯಿತು.
ಎಸ್‌ಟಿಜಿ ಕಾಲೇಜಿ ಉಪ ಪ್ರಾಂಶುಪಾಲ ಡಾ. ನಿಶಾಂತ್ ಎ.ನಾಯ್ಡು, ಸಂಸ್ಥೆಯ ಆಡಳಿತಾಧಿಕಾರಿ ನಿವೇದಿತ ನಾಗೇಶ್ ಹಾಗೂ ಕಾಲೇಜಿ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಇದ್ದರು.