

ನೆಲಮಂಗಲ: ಸ್ವಾಮಿ ವಿವೇಕಾನಂದರ ಜೀವನಾದರ್ಶ ಮತ್ತು ಸಂದೇಶಗಳು ಆಧುನಿಕ ಸಮಾಜಕ್ಕೆ ಮಾರ್ಗದರ್ಶಕವಾಗಿವೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗಸ್ವಾಮಿ ಹೇಳಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಸೋಮವಾರ ಕನ್ನಡ ಸಾಂಸ್ಕೃತಿಕ ರಂಗ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದಲ್ಲಿ ಮಾತನಾಡಿ, ಬಾಲ್ಯದಲ್ಲಿ ತುಂಟರಾಗಿದ್ದ ವಿವೇಕಾನಂದರು ಗುರುಗಳನ್ನು ಪ್ರಶ್ನಿಸಿ ಅಗಾಧವಾದ ಜ್ಞಾನಸಂಪತ್ತನ್ನು ಗಳಿಸಿಕೊಂಡರು. ಅವರ ಆದರ್ಶ ಸ್ಫೂರ್ತಿಯಿಂದ ಪ್ರಸ್ತುತ ಹಲವು ಯುವಜನರು ದೇಶದಾದ್ಯಂತ ಅವರ ಚಿಂತನೆಗಳನ್ನು ಪ್ರಸರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮತ್ತೊಬ್ಬರ ಜೀವನಕ್ಕೆ ಪ್ರಭಾವ ಬೀರುವಂತಹ ವ್ಯಕ್ತಿತ್ವ ನಮ್ಮದಾಗಬೇಕು. ಕನ್ನಡ ನಾಡು, ನುಡಿ, ಭಾಷೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕೆಲಸ ಎಂದರು.
ರಾಜ್ಯ ಅನುಸೂಚಿತ ಜಾತಿ ಬುಡಕಟ್ಟು ಆಯೋಗದ ಸದಸ್ಯ ದೊಡ್ಡೇರಿ ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಗುರಿಯೊಂದಿಗೆ ಶಕ್ತಿ ಸಾಮರ್ಥ್ಯದ ಮೇಲೆ ನಂಬಿಕೆ ಇರಬೇಕು. ಕುಟುಂಬದ ಜತೆಗೆ ದೇಶಕ್ಕಾಗಿ ಕೊಡುಗೆ ನೀಡಬೇಕಿದೆ ಎಂದರು.
ಕನ್ನಡ ಭಾಷೆಗೆ ಕೇಂದ್ರ ಸರ್ಕಾರ 15 ವರ್ಷಗಳ ಹಿಂದೆ ಶಾಸ್ತ್ರೀಯ ಸ್ಥಾನಮಾನ ನೀಡಿದೆ. ಅದರಂತೆ ಆರ್ಥಿಕ ಸ್ಥಾನವನ್ನು ನೀಡಬೇಕು. ಕನ್ನಡ ಭಾಷೆ ಪದವಿ ಕಾಲೇಜಿನಲ್ಲಿ ಐಚ್ಚಿಕ ವಿಷಯವಾಗಬೇಕು. ಜತೆಗೆ ಸರ್ಕಾರಿ ಹಾಗೂ ಖಾಸಗಿ ಶಾಲೆಯಲ್ಲಿ ಕನ್ನಡಪರ ಕಾರ್ಯಕ್ರಮಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು ಮನವಿ ಮಾಡಿದರು.
ಈ ಪ್ರಯುಕ್ತ 9 ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಿ, ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರಾಂಶುಪಾಲೆ ರೇಖಾ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಮಹಲಿಂಗಪ್ಪ.ವಿ.ನೆಗಳೂರು, ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್, ಸಾಹಿತಿ ಮಣ್ಣೆಮೋಹನ್,ಮುಖಂಡರಾದ ವೆಂಕಟೇಶ್ ಆರ್.ಚೌಥಾಯಿ, ಶಿವಲಿಂಗಯ್ಯ, ಬೈರನಹಳ್ಳಿಪ್ರಕಾಶ್‌ಮೂರ್ತಿ, ಆನಂದ್ ಮೌರ್ಯ, ಎನ್.ಆರ್.ನಾಗರಾಜು, ಜನಾರ್ದನ್, ಕಲಾವಿದ ಶಶಿಧರ್‌ಕೋಟೆ, ರಾಜ್‌ಕಿರಣ್, ಸಿ.ಎಚ್.ಸಿದ್ದಯ್ಯ, ಕನ್ನಡ ಸಾಂಷ್ಕೃತಿಕ ತಂಗದ ಪ್ರಧಾನ ಕಾರ್ಯದರ್ಶಿ ಎನ್.ಶಿವಕುಮಾರ್, ಕಾರ್ಯದರ್ಶಿ ಪಿ. ಗಿರಿಧರ್, ಸಹಕಾರ್ಯದರ್ಶಿ ಜೀವನ್ ರಂಗನಾಥ್, ಖಜಾಂಚಿ ಎಂ. ಪ್ರಕಾಶ್ ಮತ್ತಿತರರಿದ್ದರು.