ವಿವೇಕಾನಂದ ಕಾಲೇಜಿನಲ್ಲಿ ವಿಶ್ವ ಅಮ್ಮನ ದಿನಾಚರಣೆ

14Kush02
ಕುಶಾಲನಗರದಲ್ಲಿ ಶನಿವಾರ ಶಾಸಕ ಡಾ.ಮಂಥರ್‌ಗೌಡ ಅವರನ್ನು ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.
Published on

ಕುಶಾಲನಗರ: ಇಲ್ಲಿನ ವಿವೇಕಾನಂದ ಪಿಯು ಕಾಲೇಜಿನಲ್ಲಿ ವಿಶ್ವ ಅಮ್ಮನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗದವರೆಲ್ಲರೂ ತಮ್ಮ ತಮ್ಮ ತಾಯಂದಿರನ್ನು ಅಮ್ಮನ ದಿನೋತ್ಸವಕ್ಕೆ ಕರೆತಂದು ಕಾರ್ಯಕ್ರಮಕ್ಕೆ ಕಳೆತರುವುದರೊಂದಿಗೆ ಅವರನ್ನೆಲ್ಲ ಮನದುಂಬಿ ಗೌರವಿಸಿ ನಮಿಸಿದ್ದು ವಿಶೇಷವಾಗಿತ್ತು.

ಮುಖ್ಯಅತಿಥಿ ಮಂಗಳೂರಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪ್ರಮುಖ ಕೇಶವ ಬಂಗೇರ ಮಾತನಾಡಿ, ಅಮ್ಮನ ಪ್ರೀತಿಗೆ ಗೌರವ ತೋರುವ ಈ ಸುದಿನದಲ್ಲಿ ಅಮ್ಮನ ಮಮತೆಯನ್ನು ಸ್ಮರಿಸಿ ಸದಾ ಕಾಲ ಆ ತಾಯಿಗೆ ಪ್ರೀತಿಯ ಗೌರವಗಳನ್ನು ತೋರುವ ಸಂಸ್ಕಾರ ಅತ್ಯಂತ ಅಗತ್ಯವಿದೆ. ಇಂದು ಶಾಲಾ- ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಪಠ್ಯದ ಜತೆಗೆ ಉತ್ತಮ ಸಂಸ್ಕಾರಗಳನ್ನು ಕಲಿಯುವ ಮೂಲಕ ಭಾರತೀಯ ಸನಾತನ ಪರಂಪರೆಯನ್ನು ಸಂರಕ್ಷಿಸಬೇಕಿದೆ ಎಂದರು.

ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ನಾಗೇಶ್ ಮಾತನಾಡಿ, ಭಾರತೀಯ ಸನಾತನ ಪರಂಪರೆಯಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದೆ. ಪಾಶ್ಚಿಮಾತ್ಯ ಸಂಸ್ಕೃತಿ ಮೇಳೈಸುತ್ತಿರುವ ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮ ಸಂಸ್ಕಾರಗಳು ಅತಿ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ. ಕೇವಲ ಹಣ ಮತ್ತು ಆಸ್ತಿಗಾಗಿ ಹುಡುಗರನ್ನು ವರಿಸಿ ವಿವಾಹವಾಗಿ ನಂತರ ಕೈಕೊಟ್ಟು ಹೋಗುವಂತಹ ಕೆಟ್ಟ ಪರಂಪರೆ ಸನಾತನ ಸಮಾಜಕ್ಕೆ ಮಾರಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅವರ ತಾಯಿ ಶಿವಮ್ಮ, ಕಾಲೇಜಿನ ಸಂಸ್ಥಾಪಕ ಎಂ.ಜಿ.ಪ್ರಭುದೇವ್ ಅವರ ತಾಯಿ ಸರೋಜಮ್ಮ, ಚಂದ್ರಕಲಾ ಬಡಿಗೇರ್ ಮತ್ತಿತರ ತಾಯಂದಿರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸರಿಗಮಪ ಪ್ರಶಸ್ತಿ ವಿಜೇತೆ ಪ್ರಗತಿ ಬಡಿಗೇರ್ ಅವರು ಅಮ್ಮನ ಕುರಿತಾದ ಹಾಡು ಹಾಡಿ ನೆರೆದವರನ್ನು ರಂಜಿಸಿದರು. ಕಾಲೇಜಿನ ಟ್ರಸ್ಟಿ ಎನ್.ಎನ್.ನಂಜಪ್ಪ, ಮಹೇಶ್ ಅಮೀನ್, ಮಹಾತ್ಮ ಗಾಂಧಿ ಕಾಲೇಜಿನ ಪ್ರಾಂಶುಪಾಲೆ ಲಿಖಿತಾ, ವಿವೇಕಾನಂದ ಪಿಯು ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಷ್ಮಾ , ಉಪನ್ಯಾಸಕಿ ಹೇಮಾವತಿ, ವಿದ್ಯಾರ್ಥಿನಿ ಭೂಮಿಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net