

ಧಾರವಾಡ: ಕರೊನಾ ಸೋಂಕು ದೃಢಪಟ್ಟ ವ್ಯಕ್ತಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ ಹುಬ್ಬಳ್ಳಿ ವಿವೇಕಾನಂದ ಆಸ್ಪತ್ರೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಗಡಿ-ಕೆಮ್ಮು-ಜ್ವರ ಹಾಗೂ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದ ವ್ಯಕ್ತಿಯೊಬ್ಬರು ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಸೋಂಕು ತಗುಲಿರುವುದು ಸೋಮವಾರ ಖಾತ್ರಿಯಾಗುತ್ತಿದ್ದಂತೆ ಆಸ್ಪತ್ರೆಯವರು ಚಿಕಿತ್ಸೆ ನೀಡಲು ತಮ್ಮಲ್ಲಿ ಸಾಕಷ್ಟು ಸೌಕರ್ಯವಿಲ್ಲ ಎಂದು ಕಿಮ್ಸ್ಗೆ ರವಾನಿಸಿದ್ದರು. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳ ಪಟ್ಟಿಯಲ್ಲಿ ವಿವೇಕಾನಂದ ಆಸ್ಪತ್ರೆ ಇದ್ದರೂ ಈ ರೀತಿ ಮಾಡಿದ್ದರಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದರು.
ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ತೊಂದರೆ ಇಲ್ಲ. ಕಿಮ್ಸ್ನಲ್ಲಿ ಇನ್ನೂ 60 ಹಾಸಿಗೆ, ಧಾರವಾಡ ಎಸ್ಡಿಎಂನಲ್ಲಿ 100 ಹಾಸಿಗೆಗಳಿವೆ. ಒಟ್ಟು 6364 ಬೆಡ್ಗಳನ್ನು ಜಿಲ್ಲೆಯಲ್ಲಿ ಗುರುತು ಮಾಡಲಾಗಿದೆ. ಇದರ ಜತೆಗೆ 5 ಆಯುರ್ವೆದ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 125 ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 50 ಆಕ್ಸಿಜನ್ ಬೆಡ್ಗಳನ್ನು ಸಿದ್ಧಪಡಿಸುವ ಕಾರ್ಯ ಸಹ ನಡೆದಿದೆ ಎಂದರು.
ಜಿಲ್ಲೆಯಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು 17 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಅವುಗಳಿಗೆ ಪ್ಯಾಕೇಜ್ ದರಗಳನ್ನು ಜೂ. 23ರಂದು ಸರ್ಕಾರ ಹೊರಡಿಸಿದೆ. ಆಸ್ಪತ್ರೆಗಳಲ್ಲಿನ ಶೇ. 50ರಷ್ಟು ಬೆಡ್ಗಳನ್ನು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಕಾಯ್ದಿರಿಸುವಂತೆ ಸೂಚಿಸಲಾಗಿದೆ. ಎಲ್ಲರೂ ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಸಿಬ್ಬಂದಿ ಕೊರತೆ ಇದೆ. ಕಿಮ್್ಸ ಆಸ್ಪತ್ರೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದರು.
ಕಿಮ್ಸ್ನಲ್ಲಿ ರೋಗಿಗಳಿಗೆ ಆಹಾರ ಪೂರೈಕೆ ಜವಾಬ್ದಾರಿಯನ್ನು ಹೊಸ ಏಜೆನ್ಸಿಗೆ ನೀಡಲಾಗಿದೆ. ಆದರೆ, ಸರಿಯಾಗಿ ಬೇಯಿಸದ ಆಹಾರ ನೀಡಿರುವ ಕುರಿತು ಸೋಮವಾರ ದೂರು ಬಂದಿದೆ. ಈ ಕುರಿತು ಆಹಾರ ಸುರಕ್ಷತಾ ಅಧಿಕಾರಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಗುಣಮಟ್ಟದ ಆಹಾರ ನೀಡುವುದಾಗಿ ಏಜೆನ್ಸಿಯವರೂ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸರಿಯಾದ ಆಹಾರ ನೀಡದಿದ್ದರೆ ಅವರ ಪರವಾನಗಿ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.