ವಿವೇಕನಂದರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಿ

mysore
Published on

 ಮೈಸೂರು: ಆಧ್ಯಾತ್ಮಿಕ ಚೇತನ, ವೀರ ಸನ್ಯಾಸಿ ವಿವೇಕಾನಂದರ ತತ್ವಾದರ್ಶವನ್ನು ಮೈಗೂಡಿಸಿಕೊಂಡು, ವಿವೇಕದ ನಡೆಯಲ್ಲಿ ನಡೆಯುವ ಮೂಲಕ ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಸಹಯೋಗದಲ್ಲಿ ಸರಸ್ವತಿಪುರಂನ ಶ್ರೀಕುವೆಂಪು ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವ ಮನಸ್ಸುಗಳನ್ನು ಬಡಿದೆಚ್ಚರಿಸಿ ಜಾಗೃತಿಗೊಳಿಸಿದ ವಿವೇಕಾನಂದರು ಅಗಾಧವಾದ ಸಾಧನೆ ಮಾಡಿ ವಿವೇಕ ಪ್ರಭೆಯಾಗಿ ದೇಶಕ್ಕೆ ಮುಂಬೆಳಕು ನೀಡಿದವರು ಎಂದರು.

ಯುವ ಶಕ್ತಿಯ ಬಗ್ಗೆ ಅಪಾರ ನಂಬಿಕೆ ಇದ್ದ ವಿವೇಕಾನಂದರು ಯುವ ಜನರನ್ನು ಅನಗತ್ಯವಾಗಿ ಟೀಕಿಸದೆ ಅವರನ್ನು ಪ್ರೋತ್ಸಾಹಿಸಿದರು. ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುವುದರ ಜತೆಗೆ ನಿರ್ಭೀತ ನಡೆ ಬೆಳೆಸಿಕೊಂಡರೆ ನೀವು ಏನನ್ನಾದರೂ ಸಾಧಿಸಬಲ್ಲಿರಿ ಎಂದು ಯುವಜನರನ್ನು ಹುರಿದುಂಬಿಸುತ್ತಿದ್ದರು ಎಂದು ತಿಳಿಸಿದರು.

‘ಏಳಿ, ಎದ್ದೇಳಿ, ಎಚ್ಚರಗೊಳ್ಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಸ್ವಾಮಿ ವಿವೇಕಾನಂದರ ಕರೆ ಇಂದಿಗೂ ಅನುರಣಿಸುತ್ತಿದೆ. ದೇಶ ನಿಷ್ಠೆಯ, ದೇಶ ಭಕ್ತಿ ವಿವೇಕಾನಂದರಿಗೆ ಕೇವಲ ಸಿದ್ಧಾಂತವಾಗಿರಲಿಲ್ಲ. ಮಾನವ ಧರ್ಮದ ಸನ್ಮಾರ್ಗವಾಗಿತ್ತು. ಆಧ್ಯಾತ್ಮಿಕ ಹಾದಿಯಲ್ಲಿ ಉದಾತ್ತ ಚಿಂತನೆ, ಸರಳ ಬದುಕಿಗೆ ವಿವೇಕಾನಂದರು ಬಹುದೊಡ್ಡ ನಿದರ್ಶನವಾಗಿದ್ದರು. ಹೀಗಾಗಿ ಅವರನ್ನು ರಾಷ್ಟ್ರೀಯ ಸಂತ ಎಂದೇ ಗುರುತಿಸಲಾಗುತ್ತದೆ ಎಂದರು.

ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಮಾತನಾಡಿ, ವಿವೇಕಾನಂದರು ಜಗತ್ತು ಕಂಡಂತಹ ಆಧ್ಯಾತ್ಮಿಕ ಮಹಾಚೇತನ. ಆಧ್ಯಾತ್ಮ ಚಿಂತನೆಯ ಮೂಲಕ ಜಗತ್ತಿಗೆ ಬೆಳಕಾದವರು ಎಂದರು.

ಯುವ ದಿನದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಬಿ.ಆರ್.ಜಿತ್ತನ್, ಎಲ್.ರೋಹನ್, ನಂದನ್ ಕುಮಾರ್, ಭವ್ಯಶ್ರೀ, ಸ್ಪರ್ಶ, ಸಾಹಿರಾ ಅವರಿಗೆ ಬಹುಮಾನ ನೀಡಲಾಯಿತು.

ಶಿಕ್ಷಕರಾದ ಭವ್ಯಾ, ಯೂನಿಶ್ ಶರೀಫ್, ಕೃಷ್ಣ, ಮಧು, ನೇತ್ರಾ ಹಾಗೂ ಚಿತ್ರಕಲಾ ಶಿಕ್ಷಕ ಮನೋಹರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net