ವಿವೇಕ ಯುವಶಕ್ತಿ ಯೋಜನೆ ಜಾರಿಗೆ

ವಿವೇಕ ಯುವಶಕ್ತಿ ಯೋಜನೆ ಜಾರಿಗೆ
Published on


ಹಳೇಬೀಡು: ದೇಶಕ್ಕೆ ಚರಿತ್ರೆ ಇದ್ದರೆ ಸಾಲದು ಚಾರಿತ್ರ್ಯ ಬೆಳೆಸುವ ಆಧ್ಯಾತ್ಮದ ನೆಲೆ ಇರಬೇಕು. ಕೇವಲ ಕಟ್ಟಡಗಳಿಂದ ದೇಶವಾಗುವುದಿಲ್ಲ ಗುಣಾತ್ಮಕ ನಡವಳಿಕೆಯಿಂದ ಸಮೃದ್ಧ ನಾಡನ್ನು ಕಟ್ಟಬಹುದು, ಅಂತಹ ಕೆಲಸವನ್ನು ಧಾರ್ಮಿಕ ಹಿನ್ನೆಲೆಯ ಮಠಮಾನ್ಯಗಳು ನಡೆಸಿಕೊಂಡು ಬಂದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಳೇಬೀಡು ಸಮೀಪದ ಪುಷ್ಪಗಿರಿ ಶ್ರೀಮಠದಲ್ಲಿ ಕರಿಬಸವೇಶ್ವರ ಅಜ್ಜಯ್ಯ ದೇಗುಲ ಲೋಕಾರ್ಪಣೆ, ಲಕ್ಷ ದೀಪೋತ್ಸವ ಹಾಗೂ ಸಭಾಂಗಣದ ಉದ್ಘಾಟನೆ ಪ್ರಯುಕ್ತ ಬುಧವಾರ ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಾ ನಮ್ಮ ದೇಶದಲ್ಲಿ ಸಾವಿರಾರು ಮಠಗಳಿವೆ ಆಚಾರ ವಿಚಾರಗಳಿವೆ, ಆದರೆ ಅವುಗಳನ್ನು ಆಚರಿಸುವ ಮನೋಭಾವ ಇಂದು ಎಂದಿಗಿಂತಲೂ ಅಗತ್ಯವಾಗಿದೆ. ಸಂಘರ್ಷ ಇದ್ದ ಕಡೆ ಸಮನ್ವಯ ಸಾಧಿಸಬೇಕಾಗುತ್ತದೆ. ಭಾರತದಲ್ಲಿ 5000 ವರ್ಷಗಳಿಂದಲೂ ಆಧ್ಯಾತ್ಮಿಕ ಚಿಂತನೆಗಳು ಹಾಸು ಹೊಕ್ಕಾಗಿದ್ದು ಎಲ್ಲ ತಲೆ ಮಾರಿಗು ದಾರಿದೀಪವಾಗಿದೆ ಹತ್ತು ವರ್ಷಗಳ ಹಿಂದೆ ಸಣ್ಣ ಕೋಣೆಯೊಂದರಲ್ಲಿ ಮಠದ ಆಡಳಿತವನ್ನು ನಡೆಸುತ್ತಿದ್ದ ಸೋಮಶೇಖರ ಶಿವಾಚಾರ್ಯ ಶ್ರೀಗಳು ಇಂದು ಬೆಟ್ಟದ ಮೇಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದು ಅವರ ಇಚ್ಛಾಶಕ್ತಿಯ ದ್ಯೋತಕವಾಗಿದೆ. ಕಾಕತಾಳಿಯವೋ ಅಥವಾ ದೈವ ನಿರ್ಧಾರವೂ ನಾನಿಂದು ಹರಿಹರದಿಂದ ನೇರವಾಗಿ ಪು?್ಪಗಿರಿಗೆ ಬಂದಿದ್ದೇನೆ. ಇಲ್ಲಿಯ ಕರಿಬಸವೇಶ್ವರ ಅಜ್ಜಯ್ಯರ ಸನ್ನಿಧಿಯನ್ನು ನೋಡಿ ಪುನೀತನಾದೆ. ಇದರ ಮೂಲ ಸಂಸ್ಥಾನವು ಹರಿಹರದಲ್ಲೇ ಇರುವುದರಿಂದ ಯಾವುದೋ ಪ್ರೇರಣೆಯೇ ನನ್ನನಿಲ್ಲಿಗೆ ಕರೆತಂದಿದೆ ಎಂದು ಹೇಳುತ್ತಾ ಭಾವುಕರಾದರು.

ಶ್ರೀಮಠದ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಸರ್ಕಾರವು ಎಲ್ಲ ರೀತಿಯ ಸಹಕಾರವನ್ನು ಕೊಡಲಿದ್ದು ಯಾವುದೇ ರೀತಿಯ ನಗದು ಹಣವನ್ನು ನೀಡುವ ಆಶ್ವಾಸನೆಯನ್ನು ಮುಖ್ಯಮಂತ್ರಿಯಾಗಿ ನಾನು ನೀಡುವುದಿಲ್ಲ ಸರ್ಕಾರದ ಕೆಲಸವನ್ನು ಪುಷ್ಪಗಿರಿ ಮಠವು ನಿಸ್ವಾರ್ಥವಾಗಿ ಮಾಡುತ್ತಿರುವುದರಿಂದ ಮಹಿಳಾ ಸಬಲೀಕರಣ ಹಾಗೂ ಯುವಕರಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತರಲಿದೆ. ಇದಕ್ಕೆ ಮುನ್ನುಡಿಯಾಗಿ ಐದು ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ಮತ್ತು ಅವರು ತಯಾರಿಸುವ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ಜೋಡಿಸಲು ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿಗೆ ತರುತ್ತಿದ್ದು ಗರಿ?್ಠ 5 ಲಕ್ಷ ವರೆಗೆ ಸಹಾಯಧನ ನೀಡುವ ಗುರಿಯಿದೆ ಇದೇ ರೀತಿ ಯುವಕರ ಭವಿಷ್ಯಕ್ಕಾಗಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಮುಂದಿನ ತಿಂಗಳು ಜಾರಿಗೊಳಿಸುತ್ತಿದ್ದು ಆರಂಭಿಕವಾಗಿ ನಾಲ್ಕು ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನಡೆಸಲು ಅನುಕೂಲ ಕಲ್ಪಿಸಲಾಗುವುದು ಎಂದರು

ದುಡಿಮೆಯೇ ದೊಡ್ಡಪ್ಪ :
ಕಾಯಕನಿಷ್ಠ ಸಮಾಜ ನಿರ್ಮಾಣವಾದಾಗ ಅಸಮಾನತೆ ತೊಲಗುತ್ತದೆ ಹಿಂದೆ ದುಡ್ಡೇ ದೊಡ್ಡಪ್ಪ ಎನ್ನುತ್ತಿದ್ದರು ಆದರೆ ನಮ್ಮ ಸರ್ಕಾರ ಬಂದ ನಂತರ ದುಡಿಮೆಯೇ ದೊಡ್ಡಪ್ಪ ಎನ್ನುವ ಮೂಲತತ್ವವನ್ನು ಇಟ್ಟುಕೊಂಡು ದುಡಿಯುವ ವರ್ಗಕ್ಕೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿದ್ದೇವೆ. ಶ್ರಮಕ್ಕೆ ತಕ್ಕ ಮೌಲ್ಯವನ್ನು ಕೊಟ್ಟಾಗ ಮಾತ್ರ ಜನರಲ್ಲಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಮೂಡುತ್ತದೆ ಹಾಗಾಗಿ ಎಲ್ಲ ವರ್ಗಕ್ಕೆ ಸಾಮಾಜಿಕ ನ್ಯಾಯ ದೊರಕಬೇಕು ಎಂಬ ನಿಟ್ಟಿನಲ್ಲಿ ಮೀಸಲಾತಿ ನಿರ್ಧಾರವು ಸೇರಿದಂತೆ ವಿವಿಧ ಕ್ರಾಂತಿಕಾರಿ ನಿಲುವುಗಳನ್ನು ಸರ್ಕಾರವು ತೆಗೆದುಕೊಳ್ಳುತ್ತಿದೆ ನಾವು ಜನರ ಭಾವನೆಗಳನ್ನು ಅರಿತುಕೊಂಡು ಜನಪರ ರಾಜಕಾರಣ ಮಾಡಲು ಮುಂದಾಗಿದ್ದೇವೆ ಅದರಿಂದಲೇ ಜನಸಂಕಲ್ಪ ಯಾತ್ರೆಗಳಲ್ಲಿ ನಮಗೆ ಅಭೂತಪೂರ್ವ ಸ್ಪಂದನೆ ದೊರಕುತ್ತಿದೆ ಎಂದರು

ಶಾಸಕರಿಗೆ ಮಾತಿನಲ್ಲೇ ಕುಟುಕಿದ ಸಿಎಂ:
ಸ್ವಾಗತ ಭಾಷಣ ಮಾಡುತ್ತಾ ಸ್ಥಳೀಯ ಸಮಸ್ಯೆಗಳನ್ನು ತೆರೆದಿಟ್ಟ ಶಾಸಕ ಕೆ.ಎಸ್ ಲಿಂಗೇಶ್ ತಮ್ಮ ಮಾತಿನ ನಡುವೆ ಹೆಗಚಿ ಏತ ನೀರಾವರಿ ಹಾಗೂ ರಣಘಟ್ಟ ಯೋಜನೆಗಳನ್ನು ಪ್ರಸ್ತಾಪಿಸಿದರು. ಇದಕ್ಕೆ ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ನಾನು ನೀರಾವರಿ ಸಚಿವನಾಗಿದ್ದಾಗಲೇ ಯಗಚಿ ಮತ್ತು ರಣಘಟ್ಟ ಯೋಜನೆಗೆ ಮಂಜೂರಾತಿ ದೊರಕಿಸಿಕೊಟ್ಟೆ. ಆಗ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದರು.ಅವರ ಬಿಡುವಿಲ್ಲದ ಕೆಲಸದ ನಡುವೆ ಈ ಯೋಜನೆಯ ಬಗ್ಗೆ ವಿವರವಾಗಿ ತಿಳಿಸಿ ಕಾರ್ಯಗತವಾಗುವಂತೆ ಒತ್ತಾಯಿಸಿದೆ. ಅದರ ಪರಿಣಾಮ ಇಂದು ಹಳೇಬೀಡು ಮತ್ತು ಸುತ್ತಲಿನ ಕೆರೆಕಟ್ಟೆಗಳು ಶಾಶ್ವತ ನೀರಾವರಿ ಯೋಜನೆಗೆ ಒಳಪಟ್ಟಿವೆ ಜನಪ್ರತಿನಿಧಿಗಳಾಗಿ ನಮಗೆ ನಿಷ್ಠೆ ಮತ್ತು ನಿಯತ್ತಿನ ಬಗ್ಗೆ ಗಮನವಿರಬೇಕು.ಅಭಿವೃದ್ಧಿ ಕೆಲಸವಾದರೆ ಅದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಇಲ್ಲಿನ ಸ್ಥಳೀಯ ಶಾಸಕರಿಗೆ ಗೊತ್ತಾಗಿದೆ. ಹಾಗಾಗಿ ಈಗ ಹೆಬ್ಬಾಳು ಏತ ನೀರಾವರಿ ಬಗ್ಗೆ ನನ್ನಲ್ಲಿಯೇ ಪ್ರಸ್ತಾಪಿಸಿದ್ದಾರೆ. ಜನರಿಗೆ ಅನುಕೂಲವಾಗುವ ಯಾವ ಯೋಜನೆಯನ್ನೂ ನಾವು ಕೈಬಿಡದೆ ಪಕ್ಷಾತೀತವಾಗಿ ಮುನ್ನೆಡುಸುತ್ತೇವೆ. ಈ ಮಾತನ್ನು ಶಾಸಕರು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಮಾತಿನ ನಡುವೆ ಕುಟುಕಿದರು.

ಹೊಯ್ಸಳರ ಅತ್ಯಮೂಲ್ಯ ಶಿಲ್ಪಕಲೆ:
ಹೊಯ್ಸಳರ ಅತ್ಯಮೂಲ್ಯ ಶಿಲ್ಪಕಲೆಯನ್ನು ಹೊಂದಿರುವ ಹಳೇಬೀಡು ಮತ್ತು ಬೇಲೂರು ದೇಗುಲಗಳು ಸದ್ಯದಲ್ಲೇ ಪಾರಂಪರಿಕ ತಾಣವಾಗಲಿವೆ. ಅದಕ್ಕಾಗಿ ದಕ್ಷಿಣ ಕರ್ನಾಟಕ ಪ್ರವಾಸೋದ್ಯಮ ಸರ್ಕಿಟ್ ನಲ್ಲಿ ಈ ಪ್ರದೇಶಗಳನ್ನು ಸೇರಿಸಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ. ಇದಲ್ಲದೆ ಈ ಭಾಗದ ಸಂಸ್ಕೃತಿ ಸಾರುವ ಹೊಯ್ಸಳ ಉತ್ಸವವನ್ನು ಬರುವ ತಿಂಗಳಲ್ಲಿ ಆಯೋಜಿಸಲು ಎಲ್ಲ ರೀತಿಯ ಸಹಕಾರ ಮತ್ತು ಅನುದಾನವನ್ನು ಸರ್ಕಾರದಿಂದ ನೀಡಲಾಗುವುದು ಎಂದರು.


ಪುಷ್ಪಗಿರಿ ಶ್ರೀ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮಾತನಾಡಿದರು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಶಾಸಕ ಪ್ರೀತಂ ಜೆ ಗೌಡ ಬಿಜೆಪಿ ಜಿಲ್ಲಾಧ್ಯಕ್ಷ ಎಚ್ ಕೆ ಸುರೇಶ್ ಮಠದ ಕಾರ್ಯದರ್ಶಿ ಗ್ರನೈಟ್ ರಾಜಶೇಖರ್ ಮತ್ತಿತರರು ಪಾಲ್ಗೊಂಡಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net