

ಬಳ್ಳಾರಿ : ಜಗತ್ತನ್ನು ಎದುರಿಸಲು ಮತ್ತು ಗೆಲ್ಲಲು ನಿಮಗೆ ಅಧಿಕಾರ ನೀಡಿದ ಈ ಅದ್ಬುತ ವಿಶ್ವವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿಗಳಾಗಿರಿ ಎಂದು ಘಟಿಕೋತ್ಸವದ ಭಾಷಣಕಾರ ಪ್ರೊ. ಎಸ್. ಎಂ. ಶಿವಪ್ರಸಾದ್ ಅಭಿಪ್ರಾಯ ಪಟ್ಟರು.
ಇಲ್ಲಿನ ವಿಎಸ್‌ಕೆ ವಿವಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 12ನೇ ಘಟಿಕೋತ್ಸದಲ್ಲಿ ಗೌರವ ಡಾಕ್ಟರೇಟ್ ಹಾಗೂ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಿ ಮಾತನಾಡಿದರು. ನವ ಭಾರತದ ನಿರ್ಮಾಣಕ್ಕೆ ನಿಮ್ಮದೇಯಾದ ಧನಾತ್ಮಕ ಕೊಡುಗೆ ನೀಡಿ, ಮುಂದಿನ ಪೀಳಿಗೆಗೆ ಮಾದರಿಯಾಗಿ ನೋಡಲು ಬಳ್ಳಾರಿ ಮತ್ತು ಭಾರತದ ಜನರು ಎದುರು ನೋಡುತ್ತಿದ್ದಾರೆ. ಆಧುನಿಕತೆಯನ್ನು ಅಳವಡಿಸಿಕೊಳ್ಳುವದರ ಮೂಲಕ ನಮ್ಮ ಸಾಂಸ್ಕ್ರತಿಕ ಪರಂಪರೆಯನ್ನು ಬಿಟ್ಟು ಕೊಡದೆ ಉತ್ತಮ ಭಾರತಕ್ಕಾಗಿ, ಉತ್ತಮ ಜಗತ್ತಿಗೆ ಹೊಸ ಇತಿಹಾಸ ಸೃಷ್ಠಿಸುವ ಮೂಲಕ 2047ರ ವೇಳೆಗೆ ವಿಕಸಿತ್ ಭಾರತದ ವಿಶ್ವ ಗುರುವಾಗಬೇಕು ಎಂದರು. ಬಳ್ಳಾರಿ ನಗರವು ಶ್ರೀಮಂತ ಪರಂಪರೆಯ ಜತೆಗೆ ಉತ್ಸಾಹಭರಿತ ಶಿಕ್ಷಣವನ್ನು ಪೂರೈಸುವ ಸ್ಥಳವಾಗಿದೆ. ಶತಮಾನಗಳಿಂದ ಬಳ್ಳಾರಿಯು ಕಬ್ಬಿಣದ ಅದಿರು ಗಣಿಗಾರಿಕೆಗೆ ಹೆಸರುವಾಸಿಯಾಗುವುದರಿಂದ ಇದು ಉಕ್ಕಿನ ನಗರ ಎಂದು ಪ್ರಸಿದ್ಧಿ ಗಳಿಸಿದೆ. ಯುವ ಜನರನ್ನು ಸಬಲೀಕರಣಗೊಳಿಸುವ ದೃಷ್ಟಿಯೊಂದಿಗೆ ಸ್ಥಾಪಿತವಾಗಿರುವ ವಿವಿಯು ಹೊಸತನ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುವ ಶೈಕ್ಷಣಿಕ ಉತ್ಕೃಷ್ಟತೆಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಗಣಿಗಾರಿಕೆ ಉದ್ಯಮವು ಭೂಮಿಯಿಂದ ಅಮೂಲ್ಯವಾದ ಸಂಪನ್ಮೂಲಗಳನ್ನು ಹೊರತೆಗೆಯುವಂತೆಯೇ, ವಿವಿಯು ಪ್ರತಿ ವಿದ್ಯಾರ್ಥಿಯಲ್ಲಿ ಅಡಗಿರುವ ಸಾಮಥ್ಯವನ್ನು ಹೊರೆತೆಗೆಯುತ್ತದೆ ಎಂದು ಹೇಳಿದರು.
ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ, ವಿವಿ ಆವರಣದಲ್ಲಿ ವರ್ತುಲ ರಂಗ ಮಂದಿರ, ಸ್ಮಾರ್ಟ್ ತರಗತಿ, ವಿಚಾರ ಸಂಕೀರ್ಣ ಭವನ ಹಾಗೂ ಸ್ವಾಮಿ ವಿವೇಕಾನಂದ ಮೂರ್ತಿಯ ಸುತ್ತ ಬಯಲು ದಂಡು ಹಾಸಿನ ಉಪನ್ಯಾಸ ಮಂದಿರ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಗ್ರಾಮೀಣ ಪ್ರತಿಭೆಗಳು : ಜಿಲ್ಲೆಯ ಸಿರಗುಪ್ಪ ತಾಲೂಕಿನ ಉಡೇಗಳ ಗ್ರಾಮದ ದೌಲತ್ ಬಾನು ವಾಣಿಜ್ಯಶಾಸ್ತ್ರ ವಿಭಾಗದಲ್ಲಿ 3 ಚಿನ್ನದ ಪದಕ ತಮ್ಮದಾಗಿಸಿಕೊಂಡರು. ತಂದೆ ಹಮಾಲಿ ಕೆಲಸ, ತಾಯಿ ಕೂಲಿ ಮಾಡುತ್ತಿದ್ದಾರೆ. ಆದರೆ, ಚಿಕ್ಕಪ್ಪ ದಸ್ತಗಿರಿಸಾಬ್ ಇವರ ಶಿಕ್ಷಣಕ್ಕೆ ನೆರವಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಶಿಫ್ಟ್ ಇನ್ ಚಾರ್ಜ್ ಆಗಿ ಕಾರ್ಯ ನಿರ್ವಹಿಸುವ ಸಂಡೂರು ತಾಲೂಕಿನ ಸೋವೆನಹಳ್ಳಿಯ ಕೆ. ಬಿ. ನಾಗರಾಜ ಖನಿಜ ಸಂಸ್ಕ್ರರಣ ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆದು ಸರ್ಕಾರಿ ನೌಕರಿ ಪಡೆಯುವ ಆಸೆ ಹೊಂದಿದ್ದಾರೆ.