ವಿವಿಧೆಡೆ ವೈಕುಂಠ ಏಕಾದಶಿ ಸಂಭ್ರಮ

2ark1
Published on

ಅರಕಲಗೂಡು: ಪಟ್ಟಣ ಸೇರಿದಂತೆ ವಿವಿಧೆಡೆ ಸೋಮವಾರ ವೈಕುಂಠ ಏಕಾದಶಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.


ಪಟ್ಟಣದ ಪೇಟೆ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ 6 ನೇ ವರ್ಷದ ವೈಕುಂಠ ಏಕಾದಶಿಯನ್ನು ವೈಭವದಿಂದ ನಡೆಸಲಾಯಿತು. ಸಪ್ತ ದ್ವಾರಗಳ ಮೂಲಕ ತೆರಳಿ ವೈಕುಂಠದ ದ್ವಾರದಲ್ಲಿ ವೆಂಕಟೇಶನ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ತೆರಳಿ ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆದು ಧನ್ಯತೆ ಮೆರೆದರು.


ಅರೇಮಾದನಹಳ್ಳಿ ವಿಶ್ವಕರ್ಮ ಮೂಲ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ದೊಡ್ಡ ಮಠದ ಮಠಾಧೀಶ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ದೇವಾಲಯ ಸಮಿತಿ ಟ್ರಸ್ಟ್ ಅಧ್ಯಕ್ಷ ಎ.ಜಿ.ರಾಮನಾಥ್, ಮಾಜಿ ಅಧ್ಯಕ್ಷ ಎ.ಆರ್.ಜನಾರ್ದನ ಗುಪ್ತ, ಕಾರ್ಯದರ್ಶಿ ಪಿ.ಡಿ.ರಾಜೇಂದ್ರಕುಮಾರ್, ಖಜಾಂಚಿ ವಾಸುವಾಂಬ, ಸಹಕಾರ್ಯದರ್ಶಿ ಸಿ.ಎಲ್ ಜಗದೀಶ್, ಕನ್ನಿಕಾ ಮಹಲ್ ಸಮಿತಿ ಅಧ್ಯಕ್ಷ ಎ.ಎಸ್.ವೆಂಕಟೇಶ್ ಶೆಟ್ಟಿ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಪಿ.ಎನ್.ಶಾಂತಕುಮಾರ್ ಇದ್ದರು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.


ತಾಲೂಕಿನ ಕೊಣನೂರು ವೆಂಕಟರಮಣಸ್ವಾಮಿ ದೇವಸ್ಥಾನ ಹಾಗೂ ಹುಲಿಕಲ್ ಗ್ರಾಮದ ಪ್ರಸನ್ನವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಆಚರಿಸಲಾಯಿತು. ಬೆಳಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಸಹಿತ ವಿಶೇಷ ಪೂಜಾ ಕಾರ್ಯಗಳು ನಡೆದವು. ನಂತರ ರಥ ಬೀದಿಯಲ್ಲಿ ಉತ್ಸವ ನಡೆಸಲಾಯಿತು. ಜನರು ಸಾಲಿನಲ್ಲಿ ವೈಕುಂಠ ದ್ವಾರದಲ್ಲಿ ತೆರಳಿ ದೇವರ ದರ್ಶನ ಪಡೆದರು.


ಪಟ್ಟಣದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ಅಭೀಷೇಕ, ಪೂಜಾಕಾರ್ಯಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net