ವಿವಿಧೆಡೆ ಮಹದೇಶ್ವರ ಜ್ಯೋತಿ ರಥ ಸಂಚಾರ

7 mlv 1
Published on

ಮಳವಳ್ಳಿ: ಕೆ.ಆರ್.ಪೇಟೆ ತಾಲೂಕು ಅಕ್ಕಿಹೆಬ್ಬಾಳು ಹೋಬಳಿ ಸಂಗಮದಲ್ಲಿ ಅ.13 ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಕುಂಭಮೇಳಕ್ಕೆ ಮಲೈ ಮಹದೇಶ್ವರ ಬೆಟ್ಟದಿಂದ ಹೊರಟಿರುವ ಮಹದೇಶ್ವರರ ಜ್ಯೋತಿ ಹೊತ್ತ ರಥವು ಶುಕ್ರವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಮದ್ದೂರು ತಾಲೂಕಿಗೆ ತೆರಳಿತು.


ತಾಲೂಕಿನ ಸತ್ತಿಗಾಲ ಸಮೀಪದ ಗಡಿ ಭಾಗಕ್ಕೆ ಗುರುವಾರ ಸಂಜೆ ಆಗಮಿಸಿದ ಮಹದೇಶ್ವರರ ಜ್ಯೋತಿ ರಥವನ್ನು ತಾಲೂಕು ಆಡಳಿತದ ವತಿಯಿಂದ ಪ್ರಭಾರ ತಹಸೀಲ್ದಾರ್ ಬಿ.ವಿ.ಕುಮಾರ್ ಪೂಜೆ ಸಲ್ಲಿಸಿ ಬರಮಾಡಿಕೊಂಡರು.


ಉಪವಿಭಾಗಾಧಿಕಾರಿಗಳಾದ ಐಶ್ವರ್ಯಾ, ಬಿ.ಸಿ.ಶಿವಾನಂದಮೂರ್ತಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು. ನಂತರ ಬೆಳಕವಾಡಿ ಮಾರ್ಗವಾಗಿ ಬಿ.ಜಿ.ಮಂಟೇಸ್ವಾಮಿ ಮಠದಲ್ಲಿ ವಾಸ್ತವ್ಯ ಹೂಡಲಾಯಿತು. ಮಠದ ಪೀಠಾಧಿಕಾರಿ ಜ್ಞಾನಾನಂದ ಚನ್ನರಾಜೇ ಅರಸ್ ಅವರು ದಂಪತಿ ಸಮೇತ ಸ್ವಾಗತ ಕೋರಿದರು.
ಶಾಸಕ ಡಾ.ಕೆ.ಅನ್ನದಾನಿ, ಮಾಜಿ ಶಾಸಕ ಬಿ.ಸೋಮಶೇಖರ್, ಬಿಜೆಪಿ ಮುಖಂಡರಾದ ಮುನಿರಾಜು, ಯಮದೂರು ಸಿದ್ದರಾಜು ಇತರರಿದ್ದರು. ಮಠದಲ್ಲಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.


ಶುಕ್ರವಾರ ಪೂರಿಗಾಲಿ, ಮಿಕ್ಕೆರೆ, ಬಂಡೂರು, ಮಳವಳ್ಳಿ ಪಟ್ಟಣ, ಕಂದೇಗಾಲ ಸಮೀಪದ ಮತ್ತೀತಾಳೇಶ್ವರ ದೇವಸ್ಥಾನ ಮಾರ್ಗವಾಗಿ ಹಲಗೂರು, ಯತ್ತಂಬಾಡಿ ಗ್ರಾಮಗಳಲ್ಲಿ ಸಂಚರಿಸಿ ಮದ್ದೂರು ತಾಲೂಕಿಗೆ ತೆರಳಿತು. ರಥಯಾತ್ರೆ ಜಿಲ್ಲಾ ಸಂಚಾಲಕ ಡಾ.ಸಿದ್ದರಾಮಯ್ಯ, ಅಪ್ಪಾಜಿಗೌಡ, ಕೆ.ಸಿ.ನಾಗೇಗೌಡ, ಕೃಷ್ಣ, ಸಿದ್ದರಾಜು, ಮೋಹನ್, ಶಿವಲಿಂಗಸ್ವಾಮಿ, ರಾಜೀವ್, ಲೋಕೇಶ್, ರವಿ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net