

ಭಾಲ್ಕಿ: ಹಲವಾರು ಜಾತಿ, ಮತ, ಪಂಗಡಗಳಿಂದ ಕೂಡಿದ ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟçವಾಗಿದೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಹೇಳಿದರು.
ಪಟ್ಟಣದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರ ದೇಶದ ಐಕ್ಯತೆ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯದಂತೆ ನೀತಿ, ನಿಯಮಗಳನ್ನು ರೂಪಿಸಿ, ದೇಶ ನಡೆಸಿಕೊಂಡು ಬರಲಾಗುತ್ತಿದೆ. ಹಲವಾರು ಜಾತಿ, ಜನಾಂಗದವರು ವಾಸಿಸುವ ನಮ್ಮ ದೇಶದ ಜನರು ಪ್ರೀತಿ ವಿಸ್ವಾಸದಿಂದ ಬಾಳ್ವೆ ನಡೆಸಲು ಸಂವಿಧಾನ ಸಹಕಾರಿಯಾಗಿದೆ ಎಂದು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಬಸವರಾಜೇಶ್ವರಿ ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು. ಮುರಾರ್ಜಿ ದೇಸಾಯಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ವನಕೆ ಒಬ್ಬವ್ವ ರೂಪಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಪ್ರಮುಖರಾದ ಪುರಸಭೆ ಅಧ್ಯಕ್ಷೆ ಶಶಿಕಲಾ ಸಿಂದನಕೆರೆ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಸಂಗಮೇಶ ಕಾರಬಾರಿ, ಇಸಿಒ ಮಲ್ಲಿಕಾರ್ಜುನ ಕನ್ನಾಳೆ, ಸಹದೇವ.ಜಿ, ಸ್ವಾತಂತ್ರ ಹೋರಾಟಗಾರ ರಾಮರಾವ ಕುಲಕರ್ಣಿ, ರೈತಮುಖಂಡ ನಾಗಶೆಟ್ಟೆಪ್ಪ ಲಂಜವಾಡೆ, ಸಿಆರ್‌ಪಿ ಕುಸುಮಕುಮಾರಿ ಮೋಹನರೆಡ್ಡಿ, ಸಿಪಿಐ ಅಮರೇಶ ಬಿ. ಇತರರಿದ್ದರು.
ಗೋಪಾಲ ಹಿಪ್ಪರಗಿ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ ವಂದಿಸಿದರು.