

ಶ್ರೀರಂಗಪಟ್ಟಣ: ಕ್ರಿಶ್ಚಿಯನ್ ಧರ್ಮಕ್ಕೆ ಪತ್ನಿಯನ್ನು ಮತಾಂತರ ಮಾಡಲು ಯತ್ನಿಸಿದ ಪತಿ ಹಾಗೂ ಆತನ ಕುಟುಂಬಸ್ಥರ ಮೇಲೆ ಮತಾಂತರ ಕಾಯ್ದೆಯಡಿ ಪ್ರಕರಣ ದಾಖಲಿಸದೆ ಹಾಗೂ ಪ್ರಕರಣದಲ್ಲಿ ಭಾಗಿಯಾದ ಪ್ರಮುಖರನ್ನು ಬಂಧಿಸದೆ ಪೊಲೀಸರು ಮೃದುಧೋರಣೆ ತಾಳಿ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ವಿವಿಧ ಹಿಂದು ಪರ ಸಂಘಟನೆಗಳು ಬೃಹತ್ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.
ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಕುವೆಂಪು ವೃತ್ತದಲ್ಲಿ ಮಂಗಳವಾರ ಜಮಾವಣೆಗೊಂಡ ಹಿಂದು ಜಾಗರಣ ವೇದಿಕೆ, ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಹಿಂದು ಹಿತರಕ್ಷಣಾ ಮುಖಂಡರು ಮತ್ತು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಹೆದ್ದಾರಿ ರಸ್ತೆ ತಡೆ ನಡೆಸಿದರು. ಬಳಿಕ ಪಟ್ಟಣ ಮುಖ್ಯರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಸಿ ಟೌನ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.
ಈ ವೇಳೆ ಟೌನ್ ಪೊಲೀಸ್ ಠಾಣೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಒಳನುಗ್ಗಲೆತ್ನಿಸಿದ ಪ್ರತಿಭಟನಕಾರರನ್ನು ತಡೆದ ಪೊಲೀಸರ ವಿರುದ್ಧ ಮುಗಿಬಿದ್ದ ಪ್ರತಿಭಟನಾಕಾರರು ಸ್ಥಳದಲ್ಲೇ ಧರಣಿ ಕುಳಿತು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ಮಾರ್ಕಂಡೇಯ ಮಾತನಾಡಿ, ಪಾಂಡವಪುರ ನಿವಾಸಿಯಾಗಿರುವ ಆರೋಪಿ ಶ್ರೀಕಾಂತ್ ಮೂಲತಃ ಪಾಲಹಳ್ಳಿಯವರಾಗಿದ್ದು, ಈಗಾಗಲೇ ಆತನ ಕುಟುಂಬ ಭಾಗಶಃ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದೆ. ಆತನ ಪತ್ನಿ ಲಕ್ಷ್ಮೀಯನ್ನು ಸಹ ಬಲವಂತವಾಗಿ ಹಲ್ಲೆ ಮಾಡಿ ಮತಾಂತರಕ್ಕೆ ಒಳಪಡಿಸಲು ಯತ್ನಿಸಿದ್ದಾನೆ. ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿ 2 ದಿನ ಕಳೆದರೂ 2ನೇಯ ಪ್ರಮುಖ ಆರೋಪಿ ಹರೀಶ್ ಪೀಟರ್ ಎಂಬಾತ ಸೇರಿದಂತೆ ಇನ್ನು ಕೆಲವರ ಬಂಧನ ಆಗಿಲ್ಲ ಎಂದು ಕಿಡಿಕಾರಿದರು.
ಮತಾಂತರಿಗಳನ್ನು ಬಂಧಿಸದೆ ಖಾಕಿ ಪಡೆ ಕೈ ಕಟ್ಟಿ ಕುಳಿತ್ತಿದ್ದು, ಎಲ್ಲ ಸಾಕ್ಷಿಗಳಿದ್ದರೂ ಆರೋಪಿಗಳ ರಕ್ಷಣೆಗೆ ನಿಂತಿದೆ. ಮತಾಂತರಿ ಆರೋಪಿಗಳನ್ನು ಠಾಣೆಗೆ ಕರೆಸಿ ಬಿಟ್ಟು ಕಳುಹಿಸಿ, ಈಗ ಆರೋಪಿಗಳು ಸಿಕ್ಕಿಲ್ಲ ಎಂದು ಉತ್ತರ ನೀಡುತ್ತಿದ್ದೀರಾ? ನಿಮ್ಮ ಕೈಯಲ್ಲಿ ಬಂಧಿಸಲು ಆಗಲ್ಲ ಎಂದು ಲಿಖಿತ ರೂಪದಲ್ಲಿ ನಮಗೆ ಉತ್ತರ ಕೊಡಿ ಎಂದು ಆಗ್ರಹಿಸಿದರು.
ಡಿವೈಎಸ್ಪಿ ಶಾಂತಮಲ್ಲಪ್ಪ ಮಾತನಾಡಿ, ಮತಾಂತರ ಮಾಡುವ ಕುರಿತು ಯಾವುದೇ ಸಾಕ್ಷಿ ಇಲ್ಲ, ಇಲ್ಲಿ ಪರಸ್ಪರ ಪ್ರಕರಣ ದಾಖಲಾಗಿದ್ದು ಎರಡು ಕಡೆಯ ದೂರುಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಸಮಜಾಯಿಸಿ ಕೊಡಲು ಮುಂದಾದಾಗ ಕೆರಳಿದ ಹಿಂದು ಕಾರ್ಯಕರ್ತರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದೀರಾ ಎಂದು ಪೊಲೀಸರ ವಿರುದ್ಧ ತರಾಟೆಗೆ ತೆಗೆದುಕೊಂಡರು.
ವಿಶ್ವ ಹಿಂದು ಪರಿಷತ್‌ನ ಜಿಲ್ಲಾ ಸಂಚಾಲಕ ಬೆಳಗೊಳ ಸುನೀಲ್ ಮಾತನಾಡಿ, ತಾಲೂಕಿನ ಕೆಆರ್‌ಎಸ್, ಬೆಳಗೊಳ, ಪಾಲಹಳ್ಳಿ ಅದರಲ್ಲೂ ಮೊಗರಹಳ್ಳಿ ಮಂಟಿ ಗ್ರಾಮದಲ್ಲಿ ಕ್ರಿಶ್ಚಿಯನ್ ಮತಾಂತರ ಹೆಚ್ಚಾಗಿದೆ. ಈ ಬಗ್ಗೆ ಪೊಲೀಸರು ಹಾಗೂ ಸರ್ಕಾರ ಕ್ರಮವಹಿಸಿ ಕಡಿವಾಣ ಹಾಕಬೇಕು. ಪಾಲಹಳ್ಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಆರೋಪಿಗಳ ಬಂಧಿಸಬೇಕು. ಇಲ್ಲದಿದ್ದಲ್ಲಿ ಈ ಹೋರಾಟ ಜಿಲ್ಲೆ, ರಾಜ್ಯಾದ್ಯಂತ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಟೌನ್ ಠಾಣೆ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್ ಮಾತನಾಡಿ, ಆರೋಪಿಗಳನ್ನು ಶೀಘ್ರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಕಾರರು ಧರಣಿ ಹಿಂಪಡೆದರು.
ಪುರಸಭಾ ಸದಸ್ಯ ಎಸ್.ಪ್ರಕಾಶ್, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಮಾರ್ಕಂಡೇಯ, ತಾಲೂಕು ಸಂಚಾಲಕ ಹರ್ಷ, ಪ್ರಾಂತ ಕಾರ್ಯಕಾರಣಿ ಸದಸ್ಯ ವಕೀಲ ಬಾಲರಾಜು, ನಗರ ಸಂಚಾಲಕ ಶಿವು, ಬಜರಂಗದಳ ತಾಲೂಕು ಸಂಚಾಲಕ ಶಂಕರ್, ಬೆಳಗೊಳ ಹೋಬಳಿ ಸಂಚಾಲಕ ವೆಂಕಟೇಶ್, ಗೋರಕ್ಷ ತಾಲೂಕು ಪ್ರಮುಖ್ ಅಶೋಕ್ ಇದ್ದರು.