

ಬೀದರ್: ಕಾರ್ಪೊರೇಟ್ ಕುಟುಂಬದವರಿಗೆ ಬ್ಯಾಂಕ್ ಆರಂಭಿಸಲು ನೀಡಿದ ಅನುಮತಿ ವಾಪಸ್ ಪಡೆಯುವುದು ಸೇರಿದಂತೆ 13 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ, ಕಾರ್ಮಿಕರ, ದಲಿತ ಸಂಘರ್ಷ ಸಮಿತಿಗಳ ಜಂಟಿ ಸಮಿತಿಯಿಂದ ಗುರುವಾರ ಬೀರ್ ನಲ್ಲಿ ಪ್ರತಿಭಟನೆ ನಡೆಯಿತು.
ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಯಿತು. ಈ ವೇಳೆ ರಾಜ್ಯ, ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿದವು. ಕೇಂದ್ರ ಸರ್ಕಾರ ಬಂಡವಾಳಶಾಹಿದಾರರಿಗೆ ರತ್ನಗಂಬಳಿ ಹಾಕುವ ಮೂಲಕ ರೈತರ, ಬಡವರ, ಕಾರ್ಮಿಕ ಬದುಕು ದುರ್ಬರಗೊಳಿಸುವ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆಗಳು : ತಿದ್ದುಪಡಿ ಮಾಡಲಾದ ಕಾಯ್ದೆಗಳಾದ ಗ್ರಾಹಕರ ಹಿತ ರಕ್ಷಣಾ ಕಾಯ್ದೆ; ಬೆಳೆ ಭರವಸೆ ಮತ್ತು ಕೃಷಿ ಸೇವೆಗಳ ರೈತರ (ಸಶಕ್ತಿಕರಣ ಹಾಗೂ ರಕ್ಷಣೆ) ಕಾಯ್ದೆ, ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) 2020 ಕಾಯ್ದೆ ಹಾಗೂ ಕಾರ್ಮಿಕರಿಗೆ ಸಂಬಂಧಿಸಿದ, ಕನಿಷ್ಠ ಕೂಲಿಕೋಡ 2019 ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಭದ್ರತೆ ಕೋಡ್ 2020, ವೃತ್ತಿ ರಕ್ಷಣೆ ಆರೋಗ್ಯ ಮತ್ತು ಕೆಲಸ ಪರಿಸ್ಥಿತಿಗಳ ಕೋಡ 2020 ಗಳನ್ನು ಹಿಂತೆಗೆದುಕೊಳ್ಳಬೇಕು.
ಕರ್ನಾಟಕ ಭೂಸುಧಾರಣೆ ತಿದ್ದುಪಡಿ ಸುಗ್ರಿವಾಜ್ಞೆ ಹಿಂತೆಗೆದುಕೊಳ್ಳಬೇಕು. ಬಗರಹುಕುಂ ಸಾಗುವಳಿ ಕ್ರಮಬದ್ಧಗೊಳಿಸಬೇಕು. ಕರೊನಾ ನಿಮಿತ್ತ ಆದಾಯ ತೆರಿಗೆ ಅನ್ವಯವಾಗದ ಕುಟುಂಬಗಳಿಗೆ ಪ್ರತಿ ತಿಂಗಳು 7500 ರೂ. ಸಹಾಯಧನ ನೀಡಬೇಕು. ನಿರುದ್ಯೋಗಿ ಯುವಕ-ಯುವತಿಯರಿಗೆ 5000 ರೂ. ಭತ್ಯೆ ಕೊಡಬೇಕು. ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಾಸಿಕ 24,000 ಗೌರವ ಧನ ನಿಗದಿಪಡಿಸಬೇಕು. ಅತಿವೃಷ್ಠಿ ಹಾನಿಗೆ ತೆಲಂಗಾಣ ಮಾದರಿ ಪರಿಹಾರ ಒದಗಿಸಬೇಕು. ಟೇಲರ್ ವೃತ್ತಿದಾರರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಬೇಕು ಎಂಬಿತ್ಯಾದಿ ಬೇಡಿಕೆ ಮಂಡಿಸಿದರು.
ವಿವಿಧ ಸಂಘಟನೆ ಪ್ರಮುಖರಾದ ಮಾರುತಿ ಬೌದ್ಧೆ, ಮಲ್ಲಿಕಾರ್ಜುನ ಸ್ವಾಮಿ, ಬಾಬುರಾವ ಹೊನ್ನಾ, ಸಿದ್ರಾಮಪ್ಪ ಆಣದೂರೆ, ಆರ್.ಪಿ.ರಾಜಾ, ಮಹೇಶ ನಾಡಗೌಡ, ಪ್ರಭು ಹೊಚನಕಳ್ಳಿ, ಮುಬಸಿರ್ ಶಿಂಧೆ, ಅಲಿ ಅಹಮದ್ ಖಾನ್, ಮನ್ಸೂರ್ ಅಹ್ಮದ್ ಖಾದ್ರಿ, ಗುರುಪಾದಯ್ಯ ಸ್ವಾಮಿ, ಕಾಸಿಂ ಅಲಿ, ಶಾಂತಮ್ಮ ಮೂಲಗೆ, ಪಾಂಡುರಂಗ ಪ್ಯಾಗರೆ, ಶ್ರೀಮಂತ ಬಿರಾದಾರ ನಜೀರ್ ಅಹಮದ್ ಚೊಂಡಿ, ಶಫಾಯತ್ ಅಲಿ, ಅರುಣ್ ಪಟೇಲ್ ಇತರರಿದ್ದರು. ಬೇಡಿಕೆ ಸಂಬಂಧ ಜಿಲ್ಲಾಡಳಿತ ಮೂಲಕ ಪ್ರಧಾನಿ, ಮುಖ್ಯಮಂತ್ರಿ ಅವರಿಗೆ ಮನವಿಪತ್ರ ರವಾನಿಸಿದರು.