ವಿವಿಧ ಸಂಘಟನೆಗಳಿಂದ ಪ್ರತಿಭಟನೆ

IMG-20241111-WA0158
ಅರಕಲಗೂಡಿನಲ್ಲಿ ವಕ್ಫ್ ಬೋರ್ಡ್ ಹೆಸರಿಗೆ ಸರ್ಕಾರಿ ಜಾಗ ಖಾತೆ ಮಾಡಿರುವುದನ್ನು ರದ್ದುಪಡಿಸುವಂತೆ ಆಗ್ರಹಿಸಿ ಸೋಮವಾರ ಗ್ರೇಡ್-2 ತಹಸೀಲ್ದಾರ್ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಯಿತು. ರಮೇಶ್ ವಾಟಾಳ್, ಮುಖಂಡರಾದ ರವಿಕುಮಾರ್, ಎ.ಜಿ.ರಾಮಚಂದ್ರ, ಎ.ಎಸ್.ರಾಮಸ್ವಾಮಿ, ಶಶಿಕುಮಾರ್, ಸುಬ್ಬರಾವ್ ಇದ್ದರು.
Published on

ಅರಕಲಗೂಡು: ಪಟ್ಟಣದ ಹೊಳೆನರಸೀಪುರ ರಸ್ತೆ ಸರ್ವೇ ನಂ. 120ರಲ್ಲಿರುವ 4 ಎಕರೆ 10 ಗುಂಟೆ ವಿಸ್ತೀರ್ಣದ ಸರ್ಕಾರಿ ಭೂಮಿಯನ್ನು ಉಪವಿಭಾಗಾಧಿಕಾರಿಗಳು ವಕ್ಫ್ ಬೋರ್ಡ್ ಹೆಸರಿಗೆ ಖಾತೆ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕೊತ್ತಲು ಗಣಪತಿ ಉದ್ಯಾನದಲ್ಲಿ ಜಮಾವಣೆಗೊಂಡ ಮುಖಂಡರು ಸರ್ಕಾರಿ ಭೂಮಿಯನ್ನು ಏಕಾಏಕಿ ವಕ್ಫ್ ಹೆಸರಿಗೆ ಖಾತೆ ಮಾಡಿರುವ ಕ್ರಮವನು ಖಂಡಿಸಿದರು.

ಈ ಜಾಗ ತಲಾಂತರಿದಿಂದ ಸರ್ಕಾರಿ ಕೆರೆಯಾಗಿತ್ತು. ಇಲ್ಲಿ ಸುತ್ತಮುತ್ತಲಿನ ಜನರು ಗೌರಿ ವಿಸರ್ಜನೆ ನಡೆಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಇದನ್ನು ವಕ್ಫ್ ಬೋರ್ಡ್ ಪಟ್ಟಾ ಮಸೀದಿ ಪದಾಧಿಕಾರಿಗಳಿಗೆ ಎಂದು ದಾಖಲೆಗಳಲ್ಲಿ ನಮೂದಿಸಲಾಗಿತ್ತು. ಇದನ್ನು ವಜಾಗೊಳಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಇದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇರುವಾಗಲೇ ಏಕಾಏಕಿ ಖಾತೆ ಮಾಡಿರುವುದು ಸರಿಯಲ್ಲ. ಸರ್ಕಾರಿ ಜಾಗವನ್ನು ರಕ್ಷಿಸಿಕೊಳ್ಳಬೇಕಾದ ಇಲಾಖೆಯೆ ಇದನ್ನು ಒಂದು ಸಮುದಾಯದ ಹೆಸರಿಗೆ ಮಾಡಿರುವ ಕ್ರಮ ಸರಿಯಲ್ಲ. ಕೂಡಲೇ ಇದನ್ನು ರದ್ದುಪಡಿಸಿ ಸರ್ಕಾರಿ ಆಸ್ತಿಯಾಗಿ ಮುಂದುವರಿಸಬೇಕು ಹಾಗೂ ಇದನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕು. 15 ದಿನದಲ್ಲಿ ಕ್ರಮ ಜರುಗಿಸದಿದ್ದರೆ ಹೋರಾಟ ಹಮ್ಮಿಕೊಳ್ಳುವುದಾಗಿ ಮುಖಂಡ, ಪಪಂ ಸದಸ್ಯ ರಮೇಶ್ ವಾಟಾಳ್, ಮುಖಂಡರಾದ ರವಿಕುಮಾರ್, ಎ.ಜಿ.ರಾಮಚಂದ್ರ ಇತರರು ಎಚ್ಚರಿಸಿದರು. ನಂತರ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಘೋಷಣೆಗಳನ್ನು ಕೂಗಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಗ್ರೇಡ್ -2 ತಹಸೀಲ್ದಾರ್ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ದೊಡ್ಡಮ್ಮ ಸೇವಾ ಸಮಿತಿ ಅಧ್ಯಕ್ಷ ಎ.ಎಸ್.ರಾಮಸ್ವಾಮಿ, ಕಾರ್ಯದರ್ಶಿ ಶಶಿಕುಮಾರ್, ಮುಖಂಡರಾದ ಸುಬ್ಬರಾವ್, ಪ್ರಶಾಂತ್, ನಾಗೇಂದ್ರ, ರಘು, ವಕಾರೆ ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net