

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಹುದೂರು ಗ್ರಾಮದ ಬಾರಿತ್ತಾಯ ರವಿಶಂಕರ್ ನೂರಾರು ಬಗೆಯ ಹಣ್ಣುಗಳು, ಭತ್ತ ಬೆಳೆಯುತ್ತಿದ್ದಾರೆ. ಕಾಫಿ ತೋಟ, ಮನೆಯಂಗಳ, ಗದ್ದೆಯಲ್ಲಿ ನಿತ್ಯ ಕೃಷಿ ಮಾಡಿ ಸಂಭ್ರಮಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಬೆಳೆಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಬಿ.ಕಾಂ. ಪದವಿಧರರಾಗಿರುವ ಇವರು ಅಂತರ್ಜಲ ರಕ್ಷಣೆ, ಮಣ್ಣಿನ ಸಮೃದ್ಧಿ, ಕಾರ್ಮಿಕರ ವರ್ಗಕ್ಕೂ ಬಲ ನೀಡುವಂತೆ ಪೂರಕ ಚಿಂತನೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಸಹೋದರ ಭಾರಿತ್ತಾಯ ಜೈಶಂಕರ್ ಅವರೊಂದಿಗೆ ಕುಟುಂಬಕ್ಕೆ ಸೇರಿದ 33 ಏಕರೆ ಭೂಮಿಯಲ್ಲಿ ಭತ್ತ ಕೃಷಿ ಮಾಡುತ್ತಾರೆ. ಸರಾಸರಿ 750 ಕ್ವಿಂಟಾಲ್ ಭತ್ತ ತೆಗೆಯುತ್ತಾರೆ. 20ಕ್ಕೂ ತಳಿಗಳ ರಕ್ಷಣೆ, ಬಿತ್ತನೆ ಬೀಜ ಉತ್ಪಾದನೆ ಇವರ ಭತ್ತ ಕೃಷಿಯಲ್ಲಿನ ವಿಶೇಷತೆ. 35 ವರ್ಷಗಳಿಂದ 30ಕ್ಕೂ ಹೆಚ್ಚು ತಳಿಗಳನ್ನು ಬೆಳೆದು ರಕ್ಷಿಸಿಕೊಂಡು ಬರುತ್ತಿದ್ದಾರೆ. ವರ್ಷಂಪ್ರತಿ 20ಕ್ಕೂ ತಳಿಗಳನ್ನು ಬೆಳೆಯುತ್ತಾರೆ.
ಭತ್ತದ ತಳಿಗಳು: ಸೋನಾ ಮಸೂರಿ, ಕಾಕೆಸಣ್ಣ, ಕೊಂಕಣಿ ಸಣ್ಣ, ಜೀರಿಗೆಸಣ್ಣ, ದೊಡ್ಡಿ, ಚಿಂಗ್ರಿ, ಕೆಎಚ್‌ಪಿ9, ಕೆಎಚ್‌ಪಿ10, ಕೆಎಚ್‌ಪಿ11, ಧಾನ್ಯಲಕ್ಷ್ಮೀ, ಅಕ್ಷತಾ 333, ಶ್ರೀರಾಮ, ಕೃಷ್ಣ, ಪ್ರೈಜ್, ಬಿಸ್ಮತಿ, ಪಿಪಿಟಿ, ಅಂಜಲಿ, ರಾಜಮುಡಿ (ಕೆಂಪು), ರಾಜಮುಡಿ (ಬಿಳಿ ಅಕ್ಕಿ), ಪಿಯುಬಿ, ಅಂಕುರ್ ಸೋನಂ ತಳಿಗಳಾಗಿವೆ.
ಬಾಂಗ್ಲಾದೇಶದ ಬಿಸ್ಮತಿ ತಳಿ, ಕಾಕೆಸಣ್ಣ ತಳಿಯಲ್ಲಿ ಸ್ವಲ್ಪ ಎತ್ತರವಾಗಿದ್ದ ಬೆಳೆಯಿಂದ ತೆನೆಯನ್ನು ಬೇರ್ಪಡಿಸಿ 1 ಕೆಜಿಯಷ್ಟು ಭತ್ತವನ್ನು ಮತ್ತೊಂದು ತಳಿಯಾಗಿ ಬೆಳೆದಿದ್ದಾರೆ. ಕೃಷ್ಣ ಭತ್ತ ತಳಿಯ ಒಂದು ತೆನೆ ಇವರಿಗೆ ತನ್ನ ಗದ್ದೆಯಲ್ಲಿಯೇ ಪತ್ತೆಯಾಗಿತ್ತು. ಇದನ್ನು ಹೆಕ್ಕಿ ತೆಗೆದು ಬಿತ್ತನೆ ಮಾಡಿ, 4 ವರ್ಷಗಳಲ್ಲಿ 1 ಎಕರೆ ಗದ್ದೆಯಲ್ಲಿ 18 ಕ್ವಿಂಟಾಲ್‌ನಷ್ಟು ಇಳುವರಿ ತೆಗೆದಿದ್ದಾರೆ. ಇದನ್ನು ಬೇರೆ ಕೃಷಿಕರಿಗೆ ಬಿತ್ತನೆ ಬೀಜವಾಗಿ ಮಾರಾಟ ಮಾಡುತ್ತಾರೆ.
ಕಂದು ಬಣ್ಣದಿಂದ ಕೂಡಿರುವ ಈ ತಳಿ, ಗಿಡ, ತೆನೆ, ಅಕ್ಕಿ ಕೂಡ ಕಂದು ಬಣ್ಣದಲ್ಲಿರುತ್ತದೆ. ನೋಡುವಾಗ ಒಣಗಿದ ಗದ್ದೆಯಂತೆ ಕಾಣುತ್ತದೆ. ಕೆಂಪಕ್ಕಿ ಭತ್ತವಾಗಿರುವುದರಿಂದ ತೂಕ ಹೆಚ್ಚಿದೆ. ಬೆಳೆದಂತೆಲ್ಲ ಮಗುಚಿ ಬೀಳುವುದರಿಂದ ಈ ತಳಿಯನ್ನು ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ.
ಕೊಂಕಣಿ ಸಣ್ಣ, ಪ್ರೈಜ್, ಧಾನ್ಯಲಕ್ಷ್ಮೀ, ಅಂಕೂರ್ ಸೋನಂ, ಜೀರಿಗೆ ಸಣ್ಣ, ಕೆಎಚ್‌ಪಿ10, ಕೆಎಚ್‌ಪಿ11 ಹೆಚ್ಚು ಬೆಳೆಯುತ್ತಾರೆ.
ಬಿತ್ತನೆ ಬೀಜ ಉತ್ಪಾದನೆ: ತರೇಹವಾರಿ ತಳಿಗಳನ್ನು ಬೆಳೆದು ಬಿತ್ತನೆ ಬೀಜವಾಗಿ ಮಾರಾಟ ಮಾಡುವುದರಿಂದ ಇವರಿಗೆ ನಷ್ಟದ ಪ್ರಮಾಣ ಕಡಿಮೆಯಾಗುತ್ತಿದೆ. ವಾರ್ಷಿಕವಾಗಿ 90 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕ್ವಿಂಟಾಲ್‌ಗೆ 2,500 - 3000 ದೊರೆಯುತ್ತಿದೆ.
150 ಕ್ಕೂ ಹೆಚ್ಚು ಹಣ್ಣುಗಳು: ದೇಶ, ವಿದೇಶದ ಹಲವು ವಿಧದ ಹಣ್ಣುಗಳನ್ನು ಕೃಷಿ ಮಾಡಿದ್ದಾರೆ. 6 ಬಗೆಯ ಬಟರ್ ಫ್ರೂಟ್, ಮ್ಯಾಂಗೋಸ್ಟೀನ್, 4 ಬಗೆಯ ರಂಬೂತಾನ್, 5 ಬಗೆಯ ಸೀಬೆಕಾಯಿ, ಬಂಚ್ ಸೀಬೆಕಾಯಿ, ಸ್ಟ್ರಾಬೆರಿ, ರಾಂಫಲ, ಸೀತಾಫಲ, ಲಕ್ಷ್ಮಣ ಫಲ, ಹನುಮ ಫಲ, 50 ಬಗೆಯ ಮಾವು, 3 ವಿಧದ ಅಂಬಟೆ, 5 ಬಗೆಯ ವಾಟರ್ ಆ್ಯಪಲ್, 30 ವಿಧದ ಹಲಸು, ಜೀಗುಡಿ, 5 ವಿಧದ ಬಾಳೆ, 3 ವಿಧದ ಪಪಾಯ, 3 ವಿಧದ ವೈಟ್ ಸಪೋಟಾ, ರುದ್ರಾಕ್ಷಿ, ಕಿತ್ತಳೆ, ಮಿಲ್ಕ್ ಸಪೊಟ, ಬ್ಲ್ಯಾಕ್ ಬೆರಿ, ಮಲ್ಬೆರಿ, ಸ್ಪಾರ್ಕ್ ಫ್ರೂಟ್, ಮಕೊದೇವಾ, ಪಣಪುಳಿ, ನೇರಳೆ ಹಣ್ಣಿನಂತೆ ಮರದ ಕಂಡದಲ್ಲಿ ಬಿಡುವ ಜಬ್ಬುಡಿ ಕಬಾ, ಲಿಚ್ಚಿ, ಮಿಲ್ಕ್ ಫ್ರೂಟ್, ರುಚಿಯಿದ್ದರೂ ಕೆಟ್ಟ ವಾಸನೆ ಬೀರುವ ದೂರಿಯನ್, ಹೈಬ್ರಿಡ್ ಕಾಕೆ ಪಣ್ಣ್, ಕೊಡಗಿನ ಉರಿಮಳು, ಮಡಹಾಗಲ, ಗ್ರೇಪ್ಸ್, ಕಳಂಜಿ, ಇಪ್ಪೆ ಮಿಡಿ, ಮಲಯನ್ ಆ್ಯಪಲ್, ವೆಲ್ವೇಟ್ ಆ್ಯಪಲ್, ಪಲ್ಸಾ, ಲಂಗೋನ್, ಲಾಂಗಸಟ್, ಡಿಕ್ಕು ಫ್ರೂಟ್, ವುಡ್ ಆಪಲ್, ಪೈನಾಪಲ್, ಡ್ರ್ಯಾಗನ್ ಫ್ರೂಟ್, ರೋಸ್ ಆ್ಯಪಲ್, ಮರ್ಬೂಬಾ, ಸ್ಥಳೀಯ ಕಾಡು ಹಣ್ಣುಗಳಾದ ಪಾಲೆ ಪಣ್ಣ್, ಕರ್ಮಂಜಿ ಪಣ್ಣ್, ಕೊಟ್ಟೆ ಪಣ್ಣ್, ನೇರಳೆ ಹಣ್ಣು ಗಿಡಗಳಿವೆ.
ಕಹಿ ತಿಂದರೂ ಸಿಹಿ ನೀಡುವ ಮಿರಾಕಲ್ ಫ್ರೂಟ್, ಸಕ್ಕರೆ ಕಾಯಿಲೆ ನಿಯಂತ್ರಿಸಲು ಮಕೊಬೋದೆವಾ ಹಣ್ಣು, ಬಟರ್ ಫ್ರೂಟ್, ಗ್ರೇಪ್ಸ್ ಮಾರಾಟ ಹಣ್ಣು ಬೆಳೆದು ಮಾರಾಟ ಮಾಡುತ್ತಿದ್ದಾರೆ. ಮೇಣ, ಮೇಣ ಇಲ್ಲದಿರುವ 150ಕ್ಕೂ ಹೆಚ್ಚು ತಳಿಯ ಹಲಸು ಬೆಳೆದಿದ್ದಾರೆ.
ಲಾಭಕ್ಕಿಂತ ಕೃಷಿ ಮಾಡಬೇಕೆಂಬ ಆಸೆ ಹೆಚ್ಚು. ಸಂಶೋಧನೆ ಮಾಡಿ, ಲಾಭವಾಗುವ ತಳಿಯನ್ನು ಬೆಳೆದು ಜನರಿಗೆ ಬಿತ್ತನೆ ಬೀಜವಾಗಿ ಮಾರಾಟ ಮಾಡಲಾಗುತ್ತಿದೆ. ಹೊರಗೆ ಹೋಗುವ ಸಂದರ್ಭ ದೊರೆಯುವ ಹಣ್ಣುಗಳ ಗಿಡಗಳನ್ನು ತಂದು ಕೃಷಿ ಮಾಡಿ, ಹಣ್ಣು ಬಿಡುವುದನ್ನು ನೋಡುವುದು ಖುಷಿ ತರುತ್ತಿದೆ.
ಬಾರಿತ್ತಾಯ ರವಿಶಂಕರ್, ಕೃಷಿಕ