

ಹಾಸನ : ವಿದ್ಯಾರ್ಥಿಗಳ ಮೂಖ್ಯ ಬೇಡಿಕೆಗಳಾದ ವಿದ್ಯಾರ್ಥಿ ವೇತನ ಬಿಡುಗಡೆ, ಪದವಿ ಪರೀಕ್ಷೆಗಳ ಫಲಿತಾಂಶ ವಿಳಂಬ, ಸಾರಿಗೆ ವ್ಯವಸ್ಥೆ ಸಮಸ್ಯೆ, ಸರ್ಕಾರಿ ಕಾಲೇಜು ಶುಲ್ಕ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪದವಿ ಕಾಲೇಜು ವಿದ್ಯಾರ್ಥಿಗಳು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿನಿಯರು ವಿದ್ಯಾರ್ಥಿ ವೇತನ ಸರಿಯಾದ ಸಮಯಕ್ಕೆ ಬಿಡುಗಡೆ ಮಾಡದ ಕಾರಣ ಶೈಕ್ಷಣಿಕ ಪ್ರಗತಿಗೆ ತೊಡಕಾಗಿದೆ. ಫಲಿತಾಂಶ ಸರಿಯಾದ ಸಮಯಕ್ಕೆ ಪ್ರಕಟ ಮಾಡದ ಕಾರಣ ಸಾಕಷ್ಟು ವಿದ್ಯಾರ್ಥಿಗಳು ಮುಂದಿನ ವ್ಯಾಸಂಗಕ್ಕೆ ಹಿನ್ನಡೆಯಾಗಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸರಿಯಾದ ವೇಳೆಗೆ ಕಾಲೇಜು ತಲುಪಲು ಹಾಗೂ ತಮ್ಮ ಊರುಗಳಿಗೆ ತೆರಳಲು ವಿಳಂಬವಾಗುತ್ತಿದೆ ಎಂದು ದೂರಿದರು.
ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳದಿಂದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಇತರೆ ವಿಷಯಗಳಲ್ಲಿ ಕಲಿಯಲು ತೀವ್ರ ಸಂಕಷ್ಟ ಕ್ಕೆ ಗುರಿಯಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಎಲ್ಲ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಸುಪ್ರಿತ್ ಗೌಡ, ಚಂದನ್ ಎಮ್ ಎಸ್ , ಚನ್ನಕೇಶ್ ಮೂರ್ತಿ, ಪವನ್, ಮನೋಜ್, ಪ್ರವೀಣ್, ರಕ್ಷೀತಾ, ಸ್ಪಂದನಾ, ರಾಧಿಕಾ ಇತರರು ಇದ್ದರು.