

ಚಾಮರಾಜನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮುಂಭಾಗ ಬುಧವಾರ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 2011 ರಿಂದ 2023 ಮಾರ್ಚ್ ತನಕ ನಿವೃತ್ತಿಯಾದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೂ ಮತ್ತು ಸಹಾಯಕಿಯರಿಗೂ ಸುರ್ಪ್ರಿಂ ಕೋರ್ಟ್ ಆದೇಶದಂತೆ 1972 ರ ಗ್ರಾಚ್ಯುಟಿ ಮೊತ್ತವನ್ನು ಕೊಡುವಂತೆ ಒತ್ತಾಯಿಸಿದರು.
2023ರ ಜನವರಿಯಲ್ಲಿ ನಡೆದ ದೀರ್ಘ ಚಳವಳಿ ಹಿನ್ನೆಲೆಯಲ್ಲಿ 2023ರ ೆ.3 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗ್ರಾಚ್ಯುಟಿಯನ್ನು ಜಾರಿ ಮಾಡಿದೆ. ಈ ಆದೇಶ 2011 ರಿಂದ 2023 ರವರೆಗೆ ನಿವೃತ್ತಿಯಾದ 10,311 ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ 11,980 ಸಹಾಯಕಿಯರಿಗೆ ಅನ್ವಯಿಸಬೇಕು ಎಂದು ಸತತವಾಗಿ ಒತ್ತಾಯ ಮಾಡಿದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ 183 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಆದ್ದರಿಂದ ಶೀಘ್ರವಾಗಿ ಅನುದಾನವನ್ನು ಬಿಡಗಡೆ ಮಾಡಬೇಕೆಂದು ಸಿಡಿಪಿಒ ನಾಗೇಶ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ಮಾಜಿ ಅಧ್ಯಕ್ಷೆ ಸುಜಾತಾ, ಪ್ರಧಾನ ಕಾರ್ಯದರ್ಶಿ ಶಾಹಿದಾ ಬಾನು, ಖಜಾಂಚಿ ಗುರುಲಿಂಗಮ್ಮ, ಶಶಿಕಲಾ, ಲಕ್ಷ್ಮಿ, ಮಣಿ, ಮಾದಲಾಂಬಿಕಾ ಚಿಕ್ಕತಾಯಮ್ಮ, ನಾಗರತ್ನ, ರಾಜಮ್ಮ ಹಾಗೂ ಇತರರು ಹಾಜರಿದ್ದರು.