ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾಕಾರ್ಯಕರ್ತೆಯರ ಪ್ರತಿಭಟನೆ

12 ckm 2
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ತಾರಾ ಕೃಷ್ಣ, ರಾಧಾ ಸುಂದ್ರೇಶ್, ಶಿವಪ್ರಕಾಶ್, ಮೈನಾ, ಜ್ಯೋತಿ, ಗೀತಾ, ವಿಮಲಾಕ್ಷಿ, ಗಾಯತ್ರಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಮುಖ್ಯಮಂತ್ರಿಗಳು ಘೋಷಿಸಿದ ರಾಜ್ಯಸರ್ಕಾರದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ೧೦ ಸಾವಿರ ರೂ. ಗ್ಯಾರಂಟಿಗೊಳಿಸುವ ಆದೇಶವನ್ನು ಏಪ್ರಿಲ್‌ನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿ ಗೌರವಧನ ನೀಡಬೇಕು ಎಂದು ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಶಾಖೆ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು ೫೦೦ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ನಗರದ ಆಜಾದ್ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ನಂತರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿ ಕೂಡಲೇ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ರಾಜ್ಯ ಬಜೆಟ್‌ನಲ್ಲಿ ಎಲ್ಲ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೂ ೧ ಸಾವಿರ ರೂ. ಪ್ರೋತ್ಸಾಹಧನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ಜನಸಂಖ್ಯೆಯ ಮಿತಿ, ಅವೈಜ್ಞಾನಿಕ ಮೌಲ್ಯಮಾಪನ ಶಿಕ್ಷಣದ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಕೈಬಿಡಲು ಹುನ್ನಾರ ನಡೆಸುತ್ತಿರುವ ಆದೇಶವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷೆ ತಾರಾಕೃಷ್ಣ ಮಾತನಾಡಿ, ಸರ್ಕಾರ ಕೊಟ್ಟ ಮಾತಿನಂತೆ ಆಶಾ ಕಾರ್ಯಕರ್ತೆಯರಿಗೆ ೧೦ ಸಾವಿರ ರೂ. ಗೌರವ ಧನ ಕೂಡಲೇ ಬಿಡುಗಡೆ ಮಾಡಬೇಕು. ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸದಿದ್ದರೆ ಇಂದು ಜಿಲ್ಲಾಮಟ್ಟದಲ್ಲಿ ಮುಂದೆ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲು ಆಶಾ ಕಾರ್ಯಕರ್ತೆಯರು ಮುಂದಾಗುವುದಾಗಿ ಎಚ್ಚರಿಸಿದರು.

ಕಳೆದ ವರ್ಷ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಆಗಮಿಸಿದ್ದ ಮುಖ್ಯಮಂತ್ರಿಗಳು ಇನ್ನೊಂದು ತಿಂಗಳಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜ ಸೇವಕಿ ರಾಧಾ ಸುಂದ್ರೇಶ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಕ್ಕೆ ಸಮಾನಾಗಿ ವೇತನ ಕೊಡಿ ಎಂದು ಕೇಳುತ್ತಿದ್ದಾರೆ. ನ್ಯಾಯಯುತವಾಗಿರುವ ಅವರ ಬೇಡಿಕೆಗಳನ್ನು ಕೂಡಲೇ ಸರ್ಕಾರ ಇತ್ಯರ್ಥಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಐಟಿಯುಸಿ ಮುಖಂಡ ಶಿವಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಮೈನಾ, ಸಂಘದ ತಾಲೂಕು ಅಧ್ಯಕ್ಷರಾದ ಜ್ಯೋತಿ, ಗೀತಾ, ವಿಮಲಾಕ್ಷಿ, ಗಾಯತ್ರಿ, ಪವಿತ್ರ, ನಿರ್ಮಲ, ರತ್ನಮ್ಮ, ಸಾವಿತ್ರಿ, ಪ್ರೇಮ, ರೇಷ್ಮ, ಶ್ರೀಲತಾ, ಆಶಾ, ರೇಣುಕ, ನಂದಿನಿ, ಶೀಲಾ, ನಾಗಮ್ಮ, ನಳಿನ, ಚಂದ್ರಿಕ, ಶಾಂತ, ಮಂಜುಳ, ಲಾವಣ್ಯ, ಮಾಲತಿ, ಕನ್ನಡ ಸೇನೆ ಅಧ್ಯಕ್ಷ ರಾಜೇಗೌಡ, ದಾಸರಹಳ್ಳಿ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net