

ಚಾಮರಾಜನಗರ: ಜಿಲ್ಲೆಯ ರೈತ ವರ್ಗದ ಜ್ವಲಂತ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘದ ವತಿಯಿಂದ ಬೈಕ್‌ರ‌್ಯಾಲಿ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯ ಚಾಮರಾಜನಗರ, ಹನೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕು ಕೇಂದ್ರಗಳಿಂದ ಬೈಕ್ ಮೂಲಕ ಸಾಗಿಬಂದ ರೈತರು, ರಸ್ತೆಯುದ್ದಕ್ಕೂ ರೈತ ಸಂಘದ ಪರ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಡಳಿತ ಭವನಕ್ಕೆ ಸಾಗಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಜಿ.ಎಂ ಮುಕ್ತ ಭಾರತ ಹಾಗೂ ಕರ್ನಾಟಕ ಎಂದು ಘೋಷಣೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಜ ಕೃಷಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಕರ ನಿರಾಕರಣ ಚಳವಳಿ ಸಂದರ್ಭದಲ್ಲಿ ಕಟ್ಟಲಾಗದ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಬೇಕು. ಭತ್ತಕ್ಕೆ ಕೇಂದ್ರ ಸರ್ಕಾರದ ಎಂಎಸ್‌ಪಿ ಮೇಲೆ ಹೆಚ್ಚುವರಿ 500 ರೂ.ಗಳನ್ನು ರಾಜ್ಯ ಸರ್ಕಾರ ಕೊಡುವ ತೆಗೆ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಬೇಗೂರು ಸಂತೆಯಲ್ಲಿ ರೈತರಿಂದ ಸುಂಕ ವಸೂಲಿ ಮಾಡುತ್ತಿರುವುದು ನಿಲ್ಲಬೇಕು. ಹನೂರು ಭಾಗದ ಕೆಲ ಹಳ್ಳಿಗಳಿಗೆ ಕಿರು ಸೇತುವೆ ಸಂಪರ್ಕ ಕಲಿಸಬೇಕು. ಕುಡಿಯುವ ನೀರಿನ ತೊಂದರೆಯನ್ನು ಸರಿಪಡಿಸಬೇಕು. ಮಲೆಮಹದೇಶ್ವರಬೆಟ್ಟದ ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಚಂಗಡಿ ಗ್ರಾಮವನ್ನು ಶೀಘ್ರವಾಗಿ ಸ್ಥಳಾಂತರಿಸಬೇಕು. ಗುಂಡ್ಲುಪೇಟೆ ಹಾಗೂ ಹನೂರು ಭಾಗದ ಕೆಲ ಗ್ರಾಮಗಳಲ್ಲಿ ಸರ್ಕಾರಿ ಮತ್ತು ಗೋಮಾಳದಲ್ಲಿ ಪಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ಬಿಡಿಸಿ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಚಂಗಡಿ ಕರಿಯಪ್ಪ, ಈಶ್ವರಪ್ರಭು, ಪಾಪಣ್ಣ, ನಟರಾಜು, ನಾಗಪ್ಪ, ಮಹೇಶ, ಸಿದ್ದರಾಜು, ಸಿದ್ದಲಿಂಗಸ್ವಾಮಿ, ಶಂಕರ್, ವೀರಭದ್ರಸ್ವಾಮಿ, ಶಾಂತಕುಮಾರ್, ಮಾದಪ್ಪ, ರಾಜು, ಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.