

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಗುರುವಿನಪುರ ಗ್ರಾಮದಲ್ಲಿ ಚೆಂಡುಮಲ್ಲಿಗೆ ಸಂಸ್ಕರಣ ಘಟಕವನ್ನು ಪ್ರಾರಂಭಿಸಲು ಅವಕಾಶ ನೀಡಬಾರದು ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಿದರು. ರಾಜ್ಯಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತದ ವಿರುದ್ಧ ೋಷಣೆಗಳನ್ನು ಕೂಗಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಗುಂಡ್ಲುಪೇಟೆ ತಾಲೂಕಿನ ಗುರುವಿನಪುರ ಗ್ರಾಮದಲ್ಲಿ ಚೆಂಡು ಮಲ್ಲಿಗೆ ಸಂಸ್ಕರಣ ಘಟಕ ಪ್ರಾರಂಭಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇದರಿಂದಾಗಿ ಸುತ್ತಮುತ್ತಲಿನ ಪರಿಸರ ಹಾಳಾಗುತ್ತದೆ. ಅಂತರ್ಜಲ ಕುಡಿಯುವ ನೀರಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ. ಇದು ಸ್ಥಳೀಯ ರೈತರ ಆರೋಗ್ಯದ ಮೇಲೆ ಭೀಕರ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ದೂರಿದರು.
ಸರ್ಕಾರಕ್ಕೆ ತೆರಿಗೆ ಬೇಕಾಗಿದ್ದರೆ, ಸರ್ಕಾರವೇ ಅಭಿವೃದ್ಧಿಪಡಿಸಿರುವ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಚೆಂಡುಮಲ್ಲಿಗೆ ಹೂ ಸಂಸ್ಕಾರ ಘಟಕ ಮಾಡಲು ಅವಕಾಶ ಕಲ್ಪಿಸಲಿ. ಆದರೇ ಗುರುವಿನಪುರ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲೆಯೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಚಿನ್ನದ ಅವ್ಯವಹಾರದಲ್ಲಿ ರೈತರ ಚಿನ್ನ ಕೊಡಿಸುವಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಇರುವ ಕಾನೂನು ಅಡೆತಡೆಗಳನ್ನು ಸರಿಪಡಿಸಿ ತಕ್ಷಣ ರೈತರಿಗೆ ಚಿನ್ನ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಮಾತನಾಡಿ, ಯಾವುದೇ ಕಾರಣಕ್ಕೂ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕಕ್ಕೆ ಅವಕಾಶ ನೀಡುವುದಿಲ್ಲ. ರೈತರ ಚಿನ್ನ ಕೊಡಿಸುವಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಚಳುವಳಿಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಯಿತು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಂದ್ರ, ತಾಲೂಕು ಅಧ್ಯಕ್ಷ ಅರಳಿಕಟ್ಟೆ ಕುಮಾರ್, ಜನ್ನೂರು ಶಾಂತರಾಜು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಮಂಚಹಳ್ಳಿ ಮಣಿಕಂಠ, ಕೋಟೆಕೆರೆ ಮಹದೇವ ನಾಯಕ, ಉಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್, ರಾಜಶೇಖರ್, ಗುರುವಿನಪುರ ಗ್ರಾಮ ಘಟಕದ ಅಧ್ಯಕ್ಷ ಮೋಹನ್, ಚಂದ್ರು, ಬಾಬು ಇತರರು ಹಾಜರಿದ್ದರು.