

ಅರಸೀಕೆರೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಮುಖಂಡರು ಶುಕ್ರವಾರ ನಗರದ ತಾಲೂಕು ಕಚೇರಿ ಬಳಿ ಧರಣಿ ನಡೆಸಿ ಉಪತಹಸೀಲ್ದಾರ್ ಫಾಲಾಕ್ಷ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ತಾಲೂಕು ಪ್ರಧಾನ ಸಂಚಾಲಕ ಬಾಗಿವಾಳು ವಿಜಯಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಗಡದ ವರ್ಗಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಸಂಗತಿಯಾಗಿದ್ದು ಪರಿಣಾಮಕಾರಿ ಅನುಷ್ಠಾನಕ್ಕೆ ಕೂಡಲೇ ಅಧಿಸೂಚನೆ ಹೊರಡಿಸಬೇಕು.ಎಸ್‌ಸಿಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಲು ಉತ್ತೇಜಿಸುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು. ದಲಿತ ಸಮುದಾಯದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಗರ್‌ಹುಕುಂ ಜಮೀನು ಮಂಜೂರಾತಿ ಸೇರಿ ಎಲ್ಲ ಕುಂದುಕೊರತೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಸಂಚಾಲಕರಾದ ಯಡವನಹಳ್ಳಿ ಸಿದ್ದಣ್ಣ, ವೆಂಕಟೇಶ್,ಕೃಷ್ಣಮೂರ್ತಿ,ಜಗದೀಶ್, ನವೀನ್, ಕೆಂಕೆರೆ ರಾಧ ಸೇರಿ ಹಲವರು ಪಾಲ್ಗೊಂಡಿದ್ದರು.