

ಹಾಸನ: ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಸೇವಾ ಸೌಲಭ್ಯಗಳನ್ನು ನೀಡುವಂತೆ, ಮೊಬೈಲ್ ಆಪ್‌ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗಿರುವ ಒತ್ತಡವನ್ನು ನಿಲ್ಲಿಸಲು ಆಗ್ರಹಿಸಿ ತಮ್ಮ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ನಗರದ ತಹಸೀಲ್ದಾರ್ ಕಚೇರಿ ಮುಂದೆ ಕೈಗೆ ಕಪ್ಪು ಪಟ್ಟಿ ಧರಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಜೆ.ಪಿ. ವಿಶ್ವನಾಥ್ ಸುದ್ದಿಗಾರರೊಂದಿಗೆ ಮಾತನಾಡಿ, ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲಾ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಬೇಕು. ಚುನಾವಣೆಗಳ ಸಂದರ್ಭದಲ್ಲಿ, ಹಾಸನಾಂಬೆ ಉತ್ಸವದಲ್ಲಿ ನಮ್ಮನ್ನು ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಹೀಗಾಗಿ ನಮ್ಮ ಒಂದು ತಿಂಗಳ ವೇತನ ಕೊಡಬೇಕು. ಗ್ರಾಮ ಸಹಾಕರಿಗೆ ಸೇವಾ ಭದ್ರತೆಯೊಂದಿಗೆ ವೇತನ ನಿಗದಿ ಮಾಡಿ ಅವರ ಹುದ್ದೆಯನ್ನು ಕಾಯಂ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ತಾಂತ್ರಿಕ ಕೆಲಸ ಮಾಡಲು ಹುದ್ದೆ ನಿಗದಿ ಮಾಡಿದ್ದು, ನಿಗದಿತ ಶ್ರೇಣಿ ಆದೇಶ ಮಾಡಿಲ್ಲ. ಏಕಕಾಲದಲ್ಲಿ ಸುಮಾರು 15-20 ಆಪ್‌ಗಳಲ್ಲಿ ಕೆಲಸ ಮಾಡುತ್ತಿದೇವೆ. ಹಾಗಾಗಿ ಮೂಲಭೂತ ಸೌಕರ್ಯಗಳಾದ ಸುಸಜ್ಜಿತ ಕಚೇರಿ, ಕುರ್ಚಿ, ಟೇಬಲ್, ಲ್ಯಾಪ್‌ಟಾಪ್, ಆಲ್ಮೇರಾ, ಮೊಬೈಲ್, ಸಿಮ್, ಸ್ಕಾೃನರ್ ಸೌಲಭ್ಯ ಒದಗಿಸಬೇಕು. ಸೌಲಭ್ಯಗಳನ್ನು ನೀಡದೆ ನಿಗದಿತ ಸಮಯದಲ್ಲಿ ಕೆಲಸ ಮಾಡಿ ಎಂದು ಒತ್ತಡ ಹೇರುತ್ತಿದ್ದು, ಸೇವಾ ಸೌಲಭ್ಯ ಮತ್ತು ಭದ್ರತೆ ನೀಡುತ್ತಿಲ್ಲ. ಅಲ್ಲದೇ ಕೌಟುಂಬಿಕ, ಆರೋಗ್ಯದ ಹಿತದೃಷ್ಟಿಯಿಂದ ರದ್ದುಗೊಳಿಸಿರುವ ಅಂತರ ಜಿಲ್ಲಾ ವರ್ಗಾವಣೆಯನ್ನು ವಾಪಸ್ ಪಡೆಯಬೇಕು. ಪೊಲೀಸ್ ಮತ್ತು ಅರಣ್ಯ ಇಲಾಖೆಯಲ್ಲಿ ಕೊಡುತ್ತಿರುವ ರಿಸ್ಕ್ ಅಲಾಯನ್ಸ್ ನಮಗೂ ಕೊಡಬೇಕು. ಕೆಲಸಗಳ ಒತ್ತಡದಿಂದ ರಾಜ್ಯದಲ್ಲಿ ಸುಮಾರು 50 ಕ್ಕೂ ಹೆಚ್ಚು ಗ್ರಾಮ ಆಢಳಿತಾಧಿಕಾರಿಗಳು ಹೃದಯ ಖಾಯಿಲೆಗೆ ತುತ್ತಾಗಿ ಮರಣ ಹೊಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲಸಕ್ಕೆ ಒತ್ತಡ ಮಾಡದೆ ಕಾಲಾವಕಾಶ ನೀಡಿದರೆ ಗುಣಮಟ್ಟದ ಕೆಲಸ ಮಾಡುತ್ತೇವೆ. ರಜೆ ದಿನಗಳನ್ನು ನಮ್ಮ ಕುಟುಂಬದೊಡನೆ ಕಳೆಯಲು, ಹಬ್ಬಗಳನ್ನು ಆಚರಿಸಲು ಅವಕಾಶ ಕಲ್ಪಿಸಬೇಕು. ರಜೆ ದಿನಗಳಲ್ಲೂ ಸರ್ಕಾರಿ ಕೆಲಸಗಳನ್ನು ಮಾಡುತ್ತಿರುವುದರಿಂದ ಅನೇಕ ಕುಟುಂಬಗಳಲ್ಲಿ ಕಲಹ ಉಂಟಾಗುತ್ತಿದೆ. ಸರ್ಕಾರ ಕೂಡಲೆ ನಮ್ಮ ಅಹವಾಲನ್ನು ಪರಿಗಣಿಸದಿದ್ದರೆ, ರಾಜ್ಯ ಸಂಘದ ನಿರ್ದೇಶನದಂತೆ ಸೆ.27ರ ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮೌನ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಉಪಾಧ್ಯಕ್ಷೆ ಶ್ರೀಲಕ್ಷ್ಮೀ, ಬಸವರಾಜು ಮಾದಾರ್, ಕೃಷ್ಣಪ್ಪ, ಹರೀಶ್ ರಾಜ್ ಅರಸ್, ಸುಹಾಸ್, ವಸಂತ ಕುಮಾರ್ ಇತರರು ಉಪಸ್ಥಿತರಿದ್ದರು.