ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

HUN-APR-3-1(TRIBES AND DSS STRIKE)
ಹುಣಸೂರಿನ ತಾಲೂಕು ಕಚೇರಿ ಮುಂಭಾಗ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಸದಸ್ಯರು ಮತ್ತು ಆದಿವಾಸಿಗಳು ಪ್ರತಿಭಟನ ನಡೆಸಿದರು. ಹರಿಹರ ಆನಂದಸ್ವಾಮಿ, ಶಿವಣ್ಣ, ಡಾ.ಎಸ್.ಶ್ರೀಕಾಂತ್, ಹರ್ಷ, ವಿಜಯಕುಮಾರ್ ಇದ್ದರು.
Published on

ಹುಣಸೂರು: ಉಪವಿಭಾಗ ವ್ಯಾಪ್ತಿಯ ಆದಿವಾಸಿಗಳು ಮತ್ತು ದಲಿತ ಸಮುದಾಯದವರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ನಗರದ ತಾಲೂಕು ಕಚೇರಿ ಮುಂಭಾಗ ಜಮಾಯಿಸಿದ ಆದಿವಾಸಿಗಳು ಮತ್ತು ದಲಿತ ಮುಖಂಡರು, ಅತಂತ್ರ ಜೀವನ ನಡೆಸುತ್ತಿರುವ ಆದಿವಾಸಿಗಳಿಗೆ ಬದುಕಲು ಬಿಡಿ.., ನಮ್ಮ ಭೂಮಿ ನಮ್ಮ ಹಕ್ಕು.., ಅದು ನಿಮ್ಮ ಭಿಕ್ಷೆಯಲ್ಲ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸಿದರು.

ನವನಿರ್ಮಾಣ ವೇದಿಕೆ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ಆದಿವಾಸಿಗಳ ಅರಣ್ಯ ಹಕ್ಕು, ಪುನರ್ವಸತಿ, ಆದಿವಾಸಿಗಳು, ದಲಿತರು ಹಾಗೂ ಬಡ ರೈತರ ಸ್ವಾಧೀನದಲ್ಲಿರುವ ಭೂಮಿಗೆ ಹಕ್ಕು ಪತ್ರ, ಹಕ್ಕು ಪತ್ರ ಹೊಂದಿ ಕೃಷಿ ಮಾಡುತ್ತಿರುವ ಕುಟುಂಬಗಳ ಭೂಮಿಗೆ ಪಕ್ಕಾಪೋಡು, ಲಕ್ಷ್ಮಣ ತೀರ್ಥ ನದಿಯ ಸ್ವಚ್ಛತೆ ಹಾಗೂ ಜೀವನದಿಯಾಗಿ ಹರಿಯಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಉಪವಿಭಾಗವನ್ನು ಹೊಸ ಜಿಲ್ಲೆಯಾಗಿ ಘೋಷಿಸುವುದು ಸೇರಿದಂತೆ 16 ಅಂಶಗಳ ಹಕ್ಕೊತ್ತಾಯ ಪತ್ರವನ್ನು ಉಪವಿಭಾಗಾಧಿಕಾರಿಗೆ ಸಲ್ಲಿಸಲಾಗುವುದು. ಚುನಾವಣೆ ನಂತರ ಉಪವಿಭಾಗದ ವಿವಿಧ ಭಾಗಗಳಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.

ಆದಿವಾಸಿ ಮುಖಂಡ ಪಿ.ಕೆ.ರಾಮು ಮಾತನಾಡಿ, ಅರಣ್ಯ ಹಕ್ಕುಗಳ ವಿಚಾರದಲ್ಲಿ ಅರಣ್ಯ ಇಲಾಖೆ ದುರ್ನಡತೆ ಪ್ರದರ್ಶನ ಮಾಡುತ್ತಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಚಿಕ್ಕಹುಣಸೂರು ರಾಜು ಮಾತನಾಡಿ, ತಾಲೂಕಿನ ಗೋವಿಂದನಹಳ್ಳಿ ಸರ್ವೇ ನಂ.21ರಲ್ಲಿ ಸರ್ಕಾರ ಶೈಕ್ಷಣಿಕ ಉದ್ದೇಶಕ್ಕಾಗಿ ವಿವಿಧ ಸಮುದಾಯಗಳ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ನಿರ್ಮಿಸಲು 39 ಎಕರೆ ಮಂಜೂರು ಮಾಡಿದೆ. ಈ ಭೂಮಿ ಒತ್ತುವರಿದಾರರ ಪಾಲಾಗಿದೆ. ಸರ್ಕಾರ ಕೂಡಲೇ ಕ್ರಮವಹಿಸಿ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ, ಜೆ.ಡಿ.ಜಯಪ್ಪ, ವಿಜಯಕುಮಾರ್ ಮಾತನಾಡಿದರು. ರಾಜು, ಹರ್ಷ, ಡಾ.ಎಸ್.ಶ್ರೀಕಾಂತ್, ದರ್ಶನ್, ವಿಠಲ್ ನಾಣಾಚ್ಚಿ, ಬೊಮ್ಮಿ, ದಡವಯ್ಯ, ದೊಡ್ಡಮಾಸಯ್ಯ, ಗಿರಿಜಾ, ಕಲ್ಲೂರಯ್ಯ ಇತರರು ಇದ್ದರು.
ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಯದುಗಿರೀಶ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net