ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

18 Raju 3
ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗದ ಆವರಣದಲ್ಲಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ಬಿ.ಶಂಕರ, ಮಹಮ್ಮದ್ ಶಾಧಿಕ್, ಸೌಮ್ಯಾ, ರೇಖಾ, ಕವನಾ, ಜ್ಯೋತಿ, ಗೀತಾಂಜಲಿ ಮತ್ತು ಇತರರಿದ್ದರು.
Published on

ಚಾಮರಾಜನಗರ:

ಸಮುದಾಯ ಆರೋಗ್ಯ ಅಧಿಕಾರಿ(ಸಿಎಚ್‌ಒ)ಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಯಿತು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯದ ಎಲ್ಲಡೆ ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿ ಇವುಗಳ ನಿರ್ವಹಣೆಗಾಗಿ ರಾಜ್ಯದಲ್ಲಿ ಪ್ರಸ್ತುತ 6182 ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಒಳ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ದಿನನಿತ್ಯದ ಕರ್ತವ್ಯವನ್ನು ಹೊರತುಪಡಿಸಿ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಮಾನಸಿಕ ಕಿರುಕುಳ ಮತ್ತು ಹಿಂಸೆ ಅನುಭವಿಸುತ್ತಿದ್ದಾರೆ. ಬಹಳಷ್ಟು ಸಿಎಚ್‌ಒಗಳು ಕರ್ತವ್ಯದಿಂದ ಹಿಂದೆ ಸರಿದಿದ್ದಾರೆ. ಕೆಲವು ಸಿಎಚ್‌ಒಗಳು ಪ್ರಾಣವನ್ನೂ ಬಿಟ್ಟಿದ್ದಾರೆ. ಸಮುದಾಯ ಆರೋಗ್ಯ ಅಧಿಕಾರಿಗಳ ಮೂಲಭೂತ ಪರಿಹಾರಕ್ಕೆ ಒತ್ತಾಯಿಸಿ ಅಭಿಯಾನದ ಉನ್ನತಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಸಹ ಸ್ವಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಆಯುಷ್ಮಾನ್ ಭಾರತ ಹಾಗೂ ಕೇಂದ್ರ ಸರ್ಕಾರದ ಆದೇಶದನ್ವಯ ಸಮುದಾಯ ಆರೋಗ್ಯ ಅಧಿಕಾರಿಗಳ ಕಾರ್ಯಕ್ಷಮತೆ ಆಧಾರಿತ ತಿಂಗಳ ಮಾಸಿಕ ಪ್ರೋತ್ಸಾಹಧನ 15,000 ರೂ. ಪಾವತಿಸಬೇಕು. ಆದರೆ ರಾಜ್ಯದ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಮಾರ್ಗಸೂಚಿಯನ್ನು ಬದಿಗೊತ್ತಿ 8000 ರೂ. ಮಾತ್ರ ಪ್ರೋತ್ಸಾಹಧನವನ್ನು ಪಾವತಿಸುತ್ತಿದ್ದಾರೆ. ಹಾಗಾಗಿ ಮಾರ್ಗಸೂಚಿಯ ಪ್ರಕಾರ 15,000 ರೂ. ಪ್ರೋತ್ಸಾಹಧನ ಪಾವತಿಸಬೇಕು. ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕಾಯಂಗೊಳಿಸಬೇಕು. ಜತೆಗೆ ಎಲ್ಲ ಸಿಎಚ್‌ಒಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಅವರ ಮೂಲಕ ಅಭಿಯಾನದ ನಿರ್ದೇಶಕಿ ಅರುಂಧತಿ ಅವರಿಗೆ ಮನವಿ ಸಲ್ಲಿಸಲಾಯಿತು. ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಶಂಕರ, ಪ್ರಧಾನ ಕಾರ್ಯದರ್ಶಿ ವರದರಾಜು, ಖಜಾಂಚಿ ಪ್ರಮೋದ್, ಮಾಧ್ಯಮ ಸಂಚಾಲಕ ಮಹಮ್ಮದ್ ಶಾದಿಕ್, ಸಲಹಾ ಸಮಿತಿ ಸದಸ್ಯ ಮಹೇಶ್, ಸಿಎಚ್‌ಒಗಳಾದ ಸೌಮ್ಯಾ, ರೇಖಾ, ಕವನಾ, ಜ್ಯೋತಿ, ಗೀತಾಂಜಲಿ ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net