

ಹಾಸನ: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡುವ ನೆಪದಲ್ಲಿ ಸರ್ಕಾರವು ಕಾರ್ಮಿಕ ಕಲ್ಯಾಣ ಮಂಡಳಿಯ ಹಣ ಲೂಟಿ ಹೊಡೆಯುವ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರ ನೋಂದಣಿಗೆ ಮುಕ್ತ ಅವಕಾಶ ಇರುವ ಸೇವಾ ಸಿಂಧು ಮತ್ತು ಗ್ರಾಮ ಒನ್ ಲಾಗಿನ್‌ಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಕಟ್ಟಡ ನಿರ್ಮಾಣ ಮತ್ತು ಇತರ ಕಾರ್ಮಿಕ ಸಂಘಟನೆಗಳ ಸದಸ್ಯರು ಮಂಗಳವಾರ ನಗರದ ಕಾರ್ಮಿಕ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 45 ಕಿ.ಮೀ. ವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸಲು ಉಚಿತ ಬಸ್ ಸೌಲಭ್ಯ ನೀಡುತ್ತಿದೆ. ಇದಕ್ಕೆ ಒಬ್ಬ ಕಾರ್ಮಿಕನ ಪರವಾಗಿ ಮಂಡಳಿಯು ಮಾಸಿಕ 1400 ರೂ.ಗಳನ್ನು ಕೆಎಸ್‌ಆರ್‌ಟಿಸಿಗೆ ಪಾವತಿಸುತ್ತಿದೆ. ರಾಜ್ಯದಲ್ಲಿ ಒಟ್ಟು 37 ಲಕ್ಷ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿದ್ದು, ಕನಿಷ್ಠ 20 ಲಕ್ಷ ಜನರಿಗೆ ಪಾಸ್ ವಿತರಿಸಿದರೂ ಮಂಡಳಿಯು ವರ್ಷಕ್ಕೆ 3000 ಕೋಟಿ ರೂ.ಗಳನ್ನು ಕೆಎಸ್‌ಆರ್‌ಟಿಸಿಗೆ ಪಾವತಿಸಬೇಕಾಗುತ್ತದೆ. ಹೀಗಾದರೆ ಮಂಡಳಿಯಲ್ಲಿರುವ ಹಣ ಶೀಘ್ರ ಬರಿದಾಗಿ ಕಾರ್ಮಿಕರ ಕಲ್ಯಾಣಕ್ಕೆ ಹಣ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಟ್ಟಡ ನಿರ್ಮಾಣ ಕಾರ್ಮಿಕರು ಬಸ್‌ಗಳಲ್ಲಿ ಸಂಚರಿಸುವ ಸಾಧ್ಯತೆ ಕಡಿಮೆ ಇದೆ. ಬಹುತೇಕರು ದ್ವಿಚಕ್ರ ವಾಹನಗಳಲ್ಲೇ ಕೆಲಸಕ್ಕೆ ತೆರಳುವುದರಿಂದ ಉಚಿತ ಬಸ್ ಸೌಲಭ್ಯವನ್ನು ರದ್ದುಪಡಿಸಿ, ಮಂಡಳಿಯ ಹಣ ಉಳಿಸಬೇಕು ಎಂದು ಆಗ್ರಹಿಸಿದರು.
ಸೇವಾ ಸಿಂಧು ಮತ್ತು ಗ್ರಾಮ ಒನ್ ವೆಬ್‌ಸೈಟ್‌ಗಳ ಮೂಲಕ ಯಾರು ಬೇಕಾದರೂ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಇರುವುದರಿಂದ ಸರ್ಕಾರದ ಸೌಲಭ್ಯಗಳು ದುರುಪಯೋಗ ಆಗುತ್ತಿವೆ. ಆದ್ದರಿಂದ ತಕ್ಷಣ ಈ ಎರಡು ಲಾಗಿನ್‌ಗಳನ್ನು ರದ್ದುಪಡಿಸಿ, ಸದಸ್ಯತ್ವ ನೋಂದಣಿಗೆ ಅಧಿಕೃತ ಕಾರ್ಮಿಕ ಸಂಘಟನೆಗಳು ಮತ್ತ ಕಾರ್ಮಿಕ ಇಲಾಖೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
2021-22 ನೇ ಸಾಲಿನ ತಮ್ಮ ಮಕ್ಕಳ ಶೈಕ್ಷಣಿಕ ಧನಸಹಾಯಕ್ಕೆ ಸೇವಾ ಸಿಂಧು ಪೋರ್ಟಲ್ ಮೂಲಕ ಕಟ್ಟಡ ನಿರ್ಮಾಣ ಕಾರ್ಮಿಕರು ಅರ್ಜಿ ಸಲ್ಲಿಸಿದ್ದು, ಇದುವರೆಗೂ ಹಣ ಬಿಡುಗಡೆ ಆಗಿಲ್ಲ. ಜಿಲ್ಲೆಯ 5000 ಕಾರ್ಮಿಕರು ಈ ಸೌಲಭ್ಯಕ್ಕಾಗಿ ಕಾಯುತ್ತಿದ್ದಾರೆ. ತಕ್ಷಣ ಹಣ ಬಿಡುಗಡೆ ಮಾಡಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕೋವಿಡ್ ಹಂತದಲ್ಲಿ ಹಾಗೂ ನಂತರದಲ್ಲಿ ಫಲಾನುಭವಿಗಳಿಗೆ ಆಹಾರ ಕಿಟ್ ಹಾಗೂ ಆರೋಗ್ಯ ಕಿಟ್‌ಗಳನ್ನು ವಿತರಿಸಲಾಗಿದೆ. ನಂತರ ಅವರ ಕೆಲಸಗಳಿಗೆ ಅನುಕೂಲವಾಗುವಂತಹ ಉಪಕರಣಗಳ ಕಿಟ್‌ಗಳನ್ನು ನೀಡಲಾಗಿದೆ. ಈ ಕಿಟ್‌ಗಳು ಕಳಪೆಯಿಂದ ಕೂಡಿದ್ದು, ಕೆಲಸಕ್ಕೆ ಅನುಪಯುಕ್ತವಾಗಿವೆ. ಈ ಎಲ್ಲಾ ಅನವಶ್ಯಕ ಯೋಜನೆಗಳಿಂದ ಮಂಡಳಿಯ ಹಣ ಪೋಲಾಗಿದೆ. ಇದರ ಹಿಂದೆ ಭ್ರಷ್ಟಾಚಾರ ಇರುವುದು ಕಂಡು ಬಂದಿರುತ್ತದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಅಧ್ಯಕ್ಷ ಎಚ್.ಟಿ. ರಾಮೇಗೌಡ, ಎಚ್.ವಿ. ಸ್ವಾಮಿ, ಮಂಜೇಗೌಡ, ಮೋಹನ್ ಕುಮಾರ್, ರಾಜೀವ್, ರಾಜಣ್ಣ, ಚಂದ್ರು, ಸಿ. ನಾಗೇಶ್, ಫಣಿರಾಜ್, ಉಮೇಶ್ ಇತರರು ಇದ್ದರು ಇತರರು ಉಪಸ್ಥಿತರಿದ್ದರು.