ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಹಸೀಲ್ದಾರ್‌ಗೆ ಮನವಿ

21.07.2020 SDLP 01
Published on

ಶಿಡ್ಲಘಟ್ಟ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆ ಮಂಗಳವಾರ ತಹಸೀಲ್ದಾರ್ ಕೆ.ಅರುಂಧತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ವಿರೋಧದ ನಡುವೆಯೂ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರ ಕೊರಳಿಗೆ ನೇಣು ಕುಣಿಕೆ ಹಾಕಿದೆ. ಈ ಕಾಯ್ದೆಯನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಆಗ್ರಹಿಸಿದರು.

ಎಪಿಎಂಸಿಯ ದೋಷಗಳನ್ನು ಸರಿಪಡಿಸದೆ ಮಾರುಕಟ್ಟೆ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪನಿಗಳ ವಶಕ್ಕೆ ಒಪ್ಪಿಸಿರುವುದು ಸರಿಯಲ್ಲ. ವಿದ್ಯುತ್ ಸರಬರಾಜನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ತಿದ್ದುಪಡಿ ಕರಡನ್ನು ಹೊರಡಿಸಿದೆ. ಇದರಿಂದ ರೈತ ಸಮುದಾಯಕ್ಕೆ ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲ ಮರುಪಾವತಿಗೆ ಒಂದು ವರ್ಷ ಅವಕಾಶ ನೀಡುವುದು, ಕೃಷಿಗಾಗಿ ಸರಳ ರೀತಿಯಲ್ಲಿ ಬಡ್ಡಿ ರಹಿತ ಸಾಲ ನೀಡುವುದು, ಬೆಳೆಗಳ ರಕ್ಷಣೆಗೆ ಕ್ರಮ, ಹೈನುಗಾರಿಕೆಗೆ ಅಗತ್ಯವಾದ ಬೂಸಾ, ಚಕ್ಕೆ, ಫೀಡು ಮುಂತಾದವುಗಳು ನಿಗದಿತ ಬೆಲೆಗೆ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಮನವಿ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಮುನಿಕೆಂಪಣ್ಣ, ಉಪಾಧ್ಯಕ್ಷ ಶ್ಯಾಮ್, ಕಾರ್ಯಾಧ್ಯಕ್ಷ ಆಂಜಿನಪ್ಪ, ಮುನಿಯಪ್ಪ, ಅಶ್ವತ್ಥನಾರಾಯಣ, ರಮೇಶ್, ನಾರಾಯಣಸ್ವಾಮಿ, ಮುನೇಗೌಡ, ನರಸಿಂಹಮೂರ್ತಿ, ಕೇಶವ, ಮುರಳಿ, ಸುಬ್ಬರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net