ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಡಿಸಿ ಕಾರ್ಮಿಕರ ಪ್ರತಿಭಟನೆ

mysore
Published on

ಮೈಸೂರು: ಸಿಡಿಸಿ ಕಾರ್ಮಿಕರಿಗೆ ಆದ್ಯತೆ ಮೇಲೆ ಕೆಲಸ ನೀಡಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳ ಕಾರ್ಮಿಕರ ಸಂಘದ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಮಹಾರಾಣಿ ಕಾಲೇಜು ಬಳಿ ಇರುವ ಕಾಲೇಜು ಶಿಕ್ಷಣ ಮಂಡಳಿಯ ಜಂಟಿ ನಿರ್ದೇಶಕ ಕಚೇರಿ ಎದುರು ಜಮಾವಣೆಗೊಂಡ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುವ ಸಿಡಿಸಿ ಕಾರ್ಮಿಕರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಗಳಿಂದ ನೇಮಕವಾಗಿ ಪ್ರಯೋಗಾಲಯ ಸಹಾಯಕರು, ಸ್ವಚ್ಛತಾ ಸಿಬ್ಬಂದಿ, ಕಾವಲುಗಾರರು ಮತ್ತಿತರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಹಕ್ಕುಗಳ ರಕ್ಷಣೆ ಮಾಡಬೇಕಿದೆ.

ಈ ಕಾಲೇಜಿಗಳಿಗೆ ಮಂಜೂರಾಗಿ, ಖಾಲಿ ಇರುವ ಬೋಧಕತೇರ ಹುದ್ದೆಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿಯಿಂದ ಹಲವಾರು ವರ್ಷಗಳ ಹಿಂದೆಯೇ ನೇಮಕಗೊಂಡು ಅತ್ಯಂತ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಾ ಬಂದಿದ್ದೇವೆ. ಆದರೀಗ ಸರ್ಕಾರ ಈ ಹುದ್ದೆಗಳಿಗೆ ಪ್ರತಿಯಾಗಿ 1000 ಜನ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ ಎಂದು ಕಿಡಿಕಾರಿದರು.

ಹೊರಗುತ್ತಿಗೆ ಏಜೆನ್ಸಿಯು ಸೇವಾನುಭವವನ್ನು ಹೊಂದಿರುವ ಮತ್ತು ಎಸ್‌ಎಸ್‌ಎಲ್‌ಸಿ ಪಾಸಾಗದ ಕಾರ್ಮಿಕರಿಗೆ ಕೆಲಸ ನಿರಾಕರಿಸಿ, ಅವರ ಬದಲಿಗೆ ಹೊಸ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದೆ. ಇದು ಖಂಡನೀಯ.

ಸುಪ್ರೀಂಕೋರ್ಟ್ ಆದೇಶದ ಅನ್ವಯ ಹಾಲಿ ಕೆಲಸ ಮಾಡುತ್ತಿರುವ ಸಿಡಿಸಿ ಕಾರ್ಮಿಕರನ್ನೇ ನೇಮಕ ಮಾಡಿಕೊಳ್ಳಲು ಗುತ್ತಿಗೆದಾರರಿಗೆ ಸೂಚನೆ ನೀಡಬೇಕು. ಗುತ್ತಿಗೆದಾರರಿಗೆ ಕಾರ್ಮಿಕರ ವಿವರವನ್ನು ನೀಡುವ ಸಮಯದಲ್ಲಿ ಸೇವಾ ಹಿರಿತನ ಪರಿಗಣಿಸಬೇಕು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಿಡಿಸಿ ಕಾರ್ಮಿಕರಿಗೆ ಕೆಲಸ ನೀಡದೆ ಗುತ್ತಿಗೆದಾರರು ಹೊರಗಿನ ವ್ಯಕ್ತಿಗಳಿಂದ ಹಣ ಪಡೆದು ಹಾಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕೆಲಸದಿಂದ ವಂಚಿಸುತ್ತಿದ್ದಾರೆ. ಈ ಕುರಿತು ಕಾಲೇಜು ಶಿಕ್ಷಣ ಇಲಾಖೆಯಿಂದ ಪ್ರಾಂಶುಪಾಲರಿಗೆ ಮೌಖಿಕವಾಗಿ ಸಿಡಿಸಿ ಕಾರ್ಮಿಕರನ್ನೇ ಆದ್ಯತೆ ಮೇಲೆ ಕೆಲಸ ನೀಡುವಂತೆ ತಿಳಿಸಲಾಗಿದೆ.

ಆದರೆ, ಯಾವುದೇ ಪ್ರಾಂಶುಪಾಲರು ಮತ್ತು ಗುತ್ತಿಗೆದಾರರು ಕ್ರಮ ವಹಿಸುತ್ತಿಲ್ಲ. ಬದಲಿಗೆ ಹೊಸಬರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಸಿದ್ದಾರೆ ಎಂದರು.

ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನಾಕಾರರು ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದರು. ಇವರ ಹೋರಾಟದ ಫಲವಾಗಿ ಮೇ 9ರಂದು ಮಧ್ಯಾಹ್ನ 3ಕ್ಕೆ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಪ್ರಾಂಶುಪಾಲರು ಮತ್ತು ಎಲ್ಲ ಏಜೆನ್ಸಿ ಗುತ್ತಿಗೆದಾರರ ಸಭೆ ಕರೆದಿರುವುದರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್ ಪಡೆಯಲಾಯಿತು.

ಸಂಘಟನೆಯ ಮುಖಂಡರಾದ ಚಂದ್ರಶೇಖರ್ ಮೇಟಿ, ಮುದ್ದುಕೃಷ್ಣ, ಯಶೋದರ, ಮಾದಮ್ಮ, ರವಿ, ಇಂದಿರಮ್ಮ ಸೇರಿದಂತೆ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಪಾಲ್ಗೊಂಡಿದ್ದರು

ಬೇಡಿಕೆಗಳು ಏನು..?

* ಎಸ್‌ಎಸ್‌ಎಲ್‌ಸಿ ಕಡ್ಡಾಯಗೊಳಿಸದೆ ಸಿಡಿಸಿ ಕಾರ್ಮಿಕರಾಗಿ ಸೇವೆ ಸಲ್ಲಿಸಿರುವ ಹಿರಿಯ ಕಾರ್ಮಿಕರಿಗೆ ಅವಕಾಶ

* ಸೇವಾ ಹಿರಿತನದ ಮೇಲೆ ಸಿಡಿಸಿ ಕಾರ್ಮಿಕರ ಪಟ್ಟಿಯನ್ನು ಪ್ರಾಂಶುಪಾಲರು ಗುತ್ತಿಗೆದಾರರಿಗೆ ತಕ್ಷಣವೇ ನೀಡಬೇಕು

* ಗುತ್ತಿಗೆದಾರರು ಕಾಲೇಜುಗಳಲ್ಲಿ ಕೆಲಸ ಮಾಡದಿರುವ ವ್ಯಕ್ತಿಗಳಿಗೆ ನೇಮಕಾತಿ ಪತ್ರ ನೀಡಿ ಕಾಲೇಜಿಗೆ ವರದಿ ಮಾಡಿಕೊಳ್ಳಲು ಕಳುಹಿಸಿದ್ದರೆ, ಅಂತಹ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳದೆ ತಿರಸ್ಕರಿಸಬೇಕು

*ಯಾವುದಾದರೂ ಕಾಲೇಜು ಅಥವಾ ಇಲಾಖೆಯ ಕಚೇರಿಯಲ್ಲಿ ಮಂಜೂರಾದ ಹುದ್ದೆಗಳು ಖಾಲಿ ಉಳಿದಿದ್ದರೆ ಅಂತಹ ಸ್ಥಳಗಳಿಗೆ ಹತ್ತಿರದ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಿಡಿಸಿ ಕಾರ್ಮಿಕರನ್ನೇ ನೇಮಿಸಿಕೊಳ್ಳಬೇಕು

*ಹೊರಗುತ್ತಿಗೆಯಡಿ ನೇಮಕಗೊಳ್ಳುವ ಕಾರ್ಮಿಕರಿಗೆ ಸೇವಾ ಭದ್ರತೆ

*ಗುತ್ತಿಗೆದಾರರು ಕೆಲಸ ನಿರಾಕರಿಸದಂತೆ ನಿಯಮ ರೂಪಿಸುವುದು

*ಕಾರ್ಮಿಕರಿಗೆ ಭವಿಷ್ಯ ನಿಧಿ ವಂತಿಕೆ (ಇಪಿಎಫ್) ಸರಿಯಾಗಿ ಪಾವತಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವುದು

*ಪ್ರಾಂಶುಪಾಲರು ಭವಿಷ್ಯ ನಿಧಿ ವಂತಿಕೆ ಪಾವತಿ ಮಾಡಲು ಕ್ರಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net