ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈಲ್ವೆ ನೌಕರರು 4ನೇ ದಿನ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈಲ್ವೆ ನೌಕರರು 4ನೇ ದಿನ ಪ್ರತಿಭಟನೆ
Published on

ಹಾಸನ : ನೂತನ ಪಿಂಚಣಿ ಯೋಜನೆ ರದ್ದುಪಡಿಸುವುದರ ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೌಥ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್‌ನಿಂದ ನಡೆಸುತ್ತಿರುವ ಪ್ರತಿಭಟನೆ 4ನೇ ದಿನವಾದ ಗುರುವಾರವು ನಡೆಯಿತು.
ನಗರದ ರೈಲ್ವೆ ನಿಲ್ದಾಣ ಮುಂಭಾಗ ಪ್ರತಿಭಟನೆ ಆರಂಭಿಸಿರುವ ನೌಕರರು ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿಕೆಗಳಾದ ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರವು ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿದ್ದು, ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಈಗಾಗಲೇ ದೇಶದ ಅನೇಕ ರೈಲ್ವೆ ನಿಲ್ದಾಣಗಳನ್ನು ಖಾಸಗಿ ಸುಪರ್ದಿಗೆ ನೀಡಲಾಗಿದೆ. ಹಂತ ಹಂತವಾಗಿ ಎಲ್ಲಾ ವಿಭಾಗಗಳಲ್ಲೂ ಬಂಡವಾಳ ಶಾಹಿಗಳು ಕಾಲಿಡುತ್ತಾರೆ. ಇದರಿಂದ ನೌಕರರಿಗೆ ಅನ್ಯಾಯವಾಗುತ್ತದೆ ಎಂದರು.
ಹಳೆಯ ಪಿಂಚಣಿ ಯೋಜನೆಯಿಂದ ಮಾತ್ರ ನೌಕರರು ನೆಮ್ಮದಿಯಿಂದ ಬದುಕಬಹುದು. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವುದೆಂದರೆ ಸುದೈವ ಎಂಬ ಭಾವನೆಯಿದೆ. ಆದರೆ, ಈಗಿನ ಸರ್ಕಾರ ಜಾರಿಗೆ ತರುತ್ತಿರುವ ಕಾನೂನುಗಳು ಭವಿಷ್ಯದ ಪೀಳಿಗೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. 2004 ರಿಂದ ಸೇವೆಗೆ ಸೇರಿರುವ ನೌಕರರನ್ನು ಎನ್‌ಪಿಎಸ್‌ಗೆ ಸೇರಿಸಲಾಗಿದೆ. ಇದು ಸರ್ಕಾರದ ಅವೈಜ್ಞಾನಿಕ ಕ್ರಮವಾಗಿದೆ. ಸಿಬ್ಬಂದಿ ಕೊರತೆಯಿಂದ ಕೆಲಸದ ಒತ್ತಡವೂ ಹೆಚ್ಚುತ್ತಿದ್ದು, ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಸನ ಸೆಕ್ಷನ್‌ನಲ್ಲಿ 420ಕ್ಕು ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದು, ಶಿಫ್ಟ್ ಆಧಾರದಡಿ ಕೆಲಸ ಮುಗಿಸಿ ಬರುವ ನೌಕರರೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲು ಗುರುವಾರದ ವರೆಗೆ ಗಡುವು ನೀಡಿದ್ದು, ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ರೈಲ್ವೆ ನೌಕರರಾದ ವೆಂಕಟೇಶ್, ಪರಮೇಶ್, ವರಲಕ್ಷ್ಮೀ, ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net