

ಮಡಿಕೇರಿ: ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತ ನೀಡಬೇಕು ಮತ್ತು ಕೊಡವರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಗುರುವಾರ ಧರಣಿ ನಡೆಸಿದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ, ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದೆ.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಪ್ರಮುಖರು, ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತ ಪರ ಘೋಷಣೆಗಳನ್ನು ಕೂಗಿದರು.
ಕೊಡವರ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ 33 ವರ್ಷಗಳಿಂದ ಸಿಎನ್‌ಸಿ ಸಂಘಟನೆ ಶಾಂತಿಯುತ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಆದರೆ ನಮ್ಮ ನೋವಿಗೆ ಸೂಕ್ತ ಸ್ಪಂದನೆ ನೀಡುವ ಕಾರ್ಯವನ್ನು ಯಾವ ಆಡಳಿತ ವ್ಯವಸ್ಥೆಯೂ ಮಾಡಿಲ್ಲ. ಇದೀಗ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಸರ್ಕಾರ ಹಾಗೂ ಜಿಲ್ಲೆಯ ಇಬ್ಬರು ಶಾಸಕರು ಬೇಡಿಕೆಗಳಿಗೆ ಸ್ಪಂದಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ನಾಚಪ್ಪ ತಿಳಿಸಿದರು.
ಈಶಾನ್ಯ ಭಾರತದಲ್ಲಿ ಅಸ್ತಿತ್ವದಲ್ಲಿರುವ 10 ಸ್ವಾಯತ್ತ ಪ್ರದೇಶಗಳು/ಪ್ರಾದೇಶಿಕ ಕೌನ್ಸಿಲ್‌ಗಳ ಮತ್ತು ಲೇಹ್ ಹಾಗೂ ಲಡಾಖ್ ಸ್ವಾಯತ್ತ ಪ್ರದೇಶಗಳ ಸಾಲಿನಲ್ಲಿ ಕರ್ನಾಟಕದ ಸ್ವಾಯತ್ತದೊಳಗೆ ಸಂವಿಧಾನದಡಿಯಲ್ಲಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತ ಮತ್ತು ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಭಾರತದ ಸಂವಿಧಾನ ಪರಮಾರ್ಶೆ ಆಯೋಗದ ಶಿಫಾರಸ್ಸಿನಂತೆ ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಕೊಡಗಿನ ಆದಿಮ ಸಂಜಾತ ಮೂಲನಿವಾಸಿ ಕೊಡವ ಜನಾಂಗವನ್ನು ಸಂವಿಧಾನದ ಷೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸಲು ನ್ಯಾಯಾಲಯದ ಆದೇಶದಂತೆ ಕೊಡವ ಜನಾಂಗದ ಸಮಗ್ರ ಕುಲಶಾಸ್ತ್ರೀಯ ಅಧ್ಯಯನವನ್ನು ನ್ಯಾಯಯುತ ಮತ್ತು ಸಮಗ್ರ ರೀತಿಯಲ್ಲಿ ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಒಟ್ಟು 9 ಬೇಡಿಕೆಗಳ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಸಿಎನ್‌ಸಿ ಪ್ರಮುಖರಾದ ಪಟ್ಟಮಾಡ ಲಲಿತ ಗಣಪತಿ, ಕಲಿಯಂಡ ಮೀನಾ ಪ್ರಕಾಶ್, ಡಾ.ನೆರವಂಡ ವೀಣಾ ಪೂಣಚ್ಚ, ಬೊಪ್ಪಂಡ ಬೊಳ್ಳಮ್ಮ, ಕೂಪದಿರ ಪುಷ್ಪ ಮುತ್ತಣ್ಣ, ಅಪ್ಪಚ್ಚಿರ ರೀನ ನಾಣಯ್ಯ, ಕಲಿಯಂಡ ಪ್ರಕಾಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಪಟ್ಟಮಾಡ ಕುಶ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್ ಇತರರು ಪಾಲ್ಗೊಂಡಿದ್ದರು.