

ಕೊಳ್ಳೇಗಾಲ: 174ನೇ ಸರ್ವೆ ನಂ. ಪ್ರದೇಶದಲ್ಲಿ ವಾಸಮಾಡುವ ಜನರಿಗೆ ಯಾವುದೇ ಸೌಲಭ್ಯ ನೀಡದಂತೆ ಸತ್ತೇಗಾಲ ಗ್ರಾ.ಪಂ.ಗೆ ನೀಡಿರುವ ಅರಣ್ಯ ಇಲಾಖೆ ದೂರನ್ನು ವಜಾಮಾಡಿ ಹಿಂಪಡೆಯಬೇಕು. ಅಲ್ಲಿನ ಜನರಿಗೆ ಮೂಲ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ರೈತ ಸಂಘ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಗ್ರಾಮದಲ್ಲಿ ಸಮಾವೇಶಗೊಂಡ ರೈತ ಸಂಘದ ಪದಾಧಿಕಾರಿಗಳು ಕಾಲ್ನಡಿಗೆಯಲ್ಲಿ ಸತ್ತೇಗಾಲ ಗ್ರಾ.ಪಂ. ಕಚೇರಿ ಮುಂಭಾಗ ಆಗಮಿಸಿ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ವಿರುದ್ಧ ಅಕ್ರೋಶ ಹೊರ ಹಾಕಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ಬಸವರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಸತ್ತೇಗಾಲ ಗ್ರಾಮದ ಸ.ನಂ. 174 ರಲ್ಲಿ 12,760 ಏಕರೆ ಪ್ರದೇಶವಿದೆ. 1956 ಇಸವಿಗೂ ಹಿಂದೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. 1836 ರಲ್ಲಿ ಮದ್ರಾಸ್ ಸರ್ಕಾರ ರಾಮಸ್ವಾಮಿ ಮೊದಲಿಯಾರ್ ಎಂಬುವವರಿಗೆ ಇನಾಂ ಆಗಿ ನೀಡಿರುವ ಭೂಮಿಯಾಗಿದೆ. ಸಾವಿರಾರು ರೈತರು ತಮ್ಮ ಜೀವನೋಪಾಯಕ್ಕಾಗಿ 7 ದಶಕ ಗಳಿಂದಲೂ ವ್ಯವಸಾಯ ಮಾಡಿಕೊಂಡಿದ್ದಾರೆ. ಹಿಂದೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ಸರ್ಕಾರಕ್ಕೆ ಜಿಲ್ಲಾಡಳಿತ ಎಲ್ಲಾ ಮಾಹಿತಿಗಳನ್ನು ನೀಡಿದೆ.
ಕೊಳ್ಳೇಗಾಲ ಬಫರ್ ವಲಯದ ವಲಯ ಅರಣ್ಯಾಧಿಕಾರಿ 2023 ಜು. 12 ರಂದು ಪತ್ರ ಬರೆದು ಸತ್ತೇಗಾಲ ಗ್ರಾಮದ ಸ.ನಂ.174ರ ಭೂಮಿ ಮೀಸಲು ಅರಣ್ಯ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ವಾಸ ಇರುವ ಯಾರಿಗೂ ಯಾವುದೇ ಮೂಲ ಸೌಲಭ್ಯ ನೀಡದಂತೆ ಪತ್ರ ಬರೆದಿದ್ದಾರೆ. ಇದರಿಂದ ಗ್ರಾಮ ಪಂಚಾಯಿತಿ ಆ ಭಾಗಕ್ಕೆ ಯಾವುದೇ ಅನುದಾನ ನೀಡದೆ ಮೂಲ ಸೌಕರ್ಯ ನೀಡದೆ ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದೆ. ಆದರೆ ಸರ್ಕಾರ ಅರಣ್ಯ ಇಲಾಖೆಗೆ ಈ ಭೂಮಿಯನ್ನು ಹಸ್ತಾಂತರ ಮಾಡುವುದಕ್ಕಿಂತಲೂ ಮೊದಲಿನಿಂದಲೂ ಜನವಾಸ ಮಾಡುತ್ತಿದ್ದಾರೆ.
ಸತ್ತೇಗಾಲದ ಸ.ನಂ 174ರಲ್ಲಿರುವ ಒಟ್ಟು 12760 ಎಕರೆ ಪೈಕಿ ರೈತರು 4055 ಏಕರೆ ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿದ್ದು ಹಾಗೂ ಆ ಪ್ರದೇಶವು ಜನ ವಸತಿ ಪ್ರದೇಶವಾಗಿರುವುದರಿಂದ 2018ರ ಸಾಲಿನಲ್ಲಿ ಸೆಕ್ಷನ್ 17ರ ಪ್ರಕಾರ 9415 ಎಕರೆ ಪ್ರದೇಶ ಅಧಿಸೂ ಚನೆಯಾಗಿದೆ. ಅದರಲ್ಲಿ ಅಧಿಸೂಚನೆಗೂ ಮೊದಲೇ ವ್ಯವಸಾಯ ಮಾಡುತ್ತಿರುವ 710 ಏಕರೆ ಪ್ರದೇಶವನ್ನು ಕೈ ಬಿಟ್ಟು ಇನ್ನುಳಿದ 8715 ಏಕರೆ ಪ್ರದೇಶವನ್ನು ಮೀಸಲು ಅರಣ್ಯ ಪ್ರದೇಶ ಎಂದು ಮರು ಅಧಿಸೂಚನೆ ಹೊರಡಿಸಬೇಕು. ಉಳಿದಿರುವ ಒಟ್ಟು 4055 ಏಕರೆ ಪ್ರದೇಶವನ್ನು ರೈತರಿಗೆ ಸಾಗುವಳಿ ನೀಡುವುದರ ಮೂಲಕ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.
ಹಾಗೆ 2023ರಲ್ಲಿ 174 ಸ.ನಂ ಪ್ರದೇಶಕ್ಕೆ ಮೂಲ ಸೌಕರ್ಯ ನೀಡದಂತೆ ಪಂಚಾಯಿತಿಗೆ ಆರ್‌ಎಫ್‌ಒ ನೀಡಿರುವ ಪತ್ರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ್ ಬಸವರಾಜು ಅವರು ಈ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ರೈತರ ಸಭೆ ಕರೆಯುವುದಾಗಿ ನೀಡಿದ ಭರವಸೆ ಮೇರೆಗೆ ರೈತರು ಪ್ರತಿಭಟನೆ ಕೈಬಿಟ್ಟರು.
ಈ ಸಂದರ್ಭದಲ್ಲಿ ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಗಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಾನ್ ಕೆನಡಿ, ಮುಖಂಡರಾದ ಸತ್ತೇಗಾಲ ಭಾಸ್ಕರ್, ಚಾರ್ಲಿ, ಜೋಸೆಫ್ ಸಿಆರ್ ನಗರ, ನಿಕೋಲಾಸ್ ಪಾಸ್ಕಲ್ ನಗರ, ಅಂತೋಣಿ ಸ್ವಾಮಿ ಶಾಂತಿನಗರ, ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾದಮ್ಮ, ಮಾರಿಯಮ್ಮ ಇತರರಿದ್ದರು.